ಮುನಿರತ್ನಗೆ ಟಿಕೆಟ್ ಕೊಡಿಸಲು ಅಖಾಡಕ್ಕಿಳಿದ ರಮೇಶ್ ಜಾರಕಿಹೊಳಿ..!

ಬೆಂಗಳೂರು,ಅ.7-ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಾಜಿ ಶಾಸಕ ಮುನಿರತ್ನ ಅವರಿಗೆ ಟಿಕೆಟ್ ನೀಡಲೇಬೇಕೆಂದು ಸಚಿವ ರಮೇಶ್ ಜಾರಕಿಹೊಳಿ ಅಖಾಡಕ್ಕಿಳಿದಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಇಂದು ಕಾವೇರಿ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಮತ್ತು ಮುನಿರತ್ನ ಭೇಟಿಯಾಗಿ ಮಾತುಕತೆ ನಡೆಸಿದರು. ಬೆಳಗಾವಿಗೆ ತೆರಳುತ್ತಿದ್ದ ಸಿಎಂ ಅವರನ್ನು ಭೇಟಿಯಾಗಿ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಉಭಯ ನಾಯಕರು ಟಿಕೆಟ್ ಸಂಬಂಧ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಯಾವುದೇ ಸಂದರ್ಭದಲ್ಲೂ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇರುವುದರಿಂದ ವರಿಷ್ಠರ ಜೊತೆ ಮಾತುಕತೆ ನಡೆಸಬೇಕೆಂದು ಜಾರಕಿಹೊಳಿ ಮನವಿ ಮಾಡಿದ್ದಾರೆ.

ಶಾಸಕ ಸ್ಥಾನಕ್ಕೆ ಮುನಿರತ್ನ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದಾರೆ. ಅವರಿಗೆ ನ್ಯಾಯ ಒದಗಿಸಿಕೊಡಬೇಕಾದದ್ದು ಪಕ್ಷದ ಧರ್ಮ. ಪಕ್ಷಕ್ಕೆ ಬಂದ ಎಲ್ಲರಿಗೂ ಟಿಕೆಟ್ ಕೊಟ್ಟಿರುವಾಗ ಅವರೊಬ್ಬರಿಗೆ ಟಿಕೆಟ್ ತಪ್ಪಿಸುವುದರಲ್ಲಿ ಅರ್ಥವಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಜೊತೆ ಮಾತುಕತೆ ನಡೆಸಿ ಟಿಕೆಟ್ ಖಾತ್ರಿಪಡಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಬಿಎಸ್‍ವೈ ಅವರು ವರಿಷ್ಠರ ಜೊತೆ ಮಾತುಕತೆ ನಡೆಸಿದ್ದೇನೆ. ಮುನಿರತ್ನಗೆ ಟಿಕೆಟ್ ಸಿಗುವುದರಲ್ಲಿ ಯಾವ ಅನುಮಾನವೂ ಬೇಡ. ನಿಶ್ಚಂತೆಯಿಂದ ಇರು ಎಂದು ಅಭಯ ನೀಡಿದ್ದಾರೆ. ಮುಖ್ಯಮಂತ್ರಿಗಳಿಂದ ಟಿಕೆಟ್ ಭರವಸೆ ದೊರೆತ ನಂತರ ರಮೇಶ್ ಜಾರಕಿಹೊಳಿ ಮತ್ತು ಮುನಿರತ್ನ ಕಾವೇರಿ ನಿವಾಸದಿಂದ ತುಸು ನಿರಾಳವಾಗಿ ಹೊರಬಂದಿದ್ದಾರೆ.

Sri Raghav

Admin