ತಮ್ಮನಿಗೆ ಟಿಕೆಟ್ ಮಿಸ್ : ಸಿಎಂ ಭೇಟಿಯಾದ ಸಾಹುಕಾರ್

ಬೆಂಗಳೂರು, ನ.21- ಸಹೋದರ ಲಖನ್ ಜಾರಕಿಹೊಳಿಗೆ ಮೇಲ್ಮನೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಸಿಎಂ ಭೇಟಿ ಮಾಡಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಇಂದು ಬೆಳಗ್ಗೆ ಸಿಎಂ ನಿವಾಸಕ್ಕೆ ಆಗಮಿಸಿದ ರಮೇಶ್ ಜಾರಕಿಹೊಳಿ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು , ಕುತೂಹಲ ಕೆರಳಿಸಿತು.

ಈ ಹಿಂದೆ ಲಖನ್ ಜಾರಕಿಹೊಳಿಗೆ ಅವಕಾಶ ಕೊಡುವ ಆಶ್ವಾಸನೆ ನೀಡಿದ್ದ ಬಿಜೆಪಿ ವರಿಷ್ಠರು ಈಗ ಯು ಟರ್ನ್ ಹೊಡೆದಿರುವುದು ಜಾರಕಿಹೊಳಿ ಸಹೋದರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಮೂರ್ನಾಲ್ಕು ತಿಂಗಳಿನಿಂದ ಬೆಳಗಾವಿ ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳು ಬರುವುದರಿಂದ ಒಂದು ಕಡೆ ಲಖನ್‍ಗೆ ಟಿಕೆಟ್ ಕೊಡಿಸಲು ಭಾರೀ ಪ್ರಯಾಸ ಪಟ್ಟಿದ್ದ ರಮೇಶ್ ಕೊನೆಗೂ ವಿಫಲರಾಗಿರುವುದು ಮತ್ತೆ ಆಕ್ರೋಶಕ್ಕೆ ಕಾರಣವಾಗಿದೆ.

ಸಿಎಂ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡದೆಯೇ ತೆರಳಿದ ರಮೇಶ್ ಮುನಿಸಿಕೊಂಡಂತೆ ಕಂಡು ಬಂದಿತ್ತು. ಇದು ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.