ಬೆಂಗಳೂರು,ಮಾ.19 – ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಅವರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಈ ಬೆಳವಣಿಗೆ ಹಲವರ ಹುಬ್ಬೇರುವಂತೆ ಮಾಡಿದೆ.
ಅಮಿತ್ ಶಾ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿಯವರು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.
ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿಯ ಭವಿಷ್ಯ ಮತ್ತು ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಶಾ ಅವರೊಂದಿಗೆ ಮಾಹಿತಿ ಹಂಚಿಕೊಂಡಿದ್ದೇನೆ ಎಂದು ತಿಳಿಸಿದರು. ವಿಶೇಷವಾಗಿ ಬೆಳಗಾವಿ ಪ್ರದೇಶದ ಕ್ಷೇತ್ರಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಲು ಅನುಸರಿಸಬಹುದಾದ ರಾಜಕೀಯ ತಂತ್ರಗಳ ಬಗ್ಗೆಯೂ ಚರ್ಚೆ ನಡೆಸಿದೆ. ಆದರೆ, ಸಭೆಯಲ್ಲಿ ಚರ್ಚೆಯಾದ ಕೆಲವು ಗೌಪ್ಯ ವಿಚಾರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು.
ನಕಲಿ IPS ಅಧಿಕಾರಿ ಬಂಧನ : 36 ಲಕ್ಷ ಹಣ ಸೇರಿ 54 ಲಕ್ಷ ಮೌಲ್ಯದ ಮಾಲು ಜಪ್ತಿ
ಈ ನಡುವೆ ಕರ್ನಾಟಕ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ಬೆಳಗಾವಿಯಲ್ಲಿ ಇತ್ತೀಚೆಗೆ ಕರೆದಿದ್ದ ಸಭೆಯಲ್ಲಿ ಬಿಜೆಪಿಯ ಹಲವು ಶಾಸಕರು ತಮ್ಮ ವಿರುದ್ಧ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ರಮೇಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
ಬೆಳಗಾವಿಯ ಎಲ್ಲಾ ಬಿಜೆಪಿ ಶಾಸಕರು ಮತ್ತು ಸಂಸದರು ಧರ್ಮೇಂದ್ರ ಪ್ರಧಾನ್ ಅವರು ನಡೆಸಿದ್ದ ಸಭೆಯಲ್ಲಿ ಭಾಗವಹಿಸಿದ್ದು, ಈ ವೇಳೆ ಹಲವು ನಾಯಕರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳ ವ್ಯವಹಾರಗಳಲ್ಲಿ ರಮೇಶ್ ಹಸ್ತಕ್ಷೇಪ ಮಾಡುತ್ತಿರುವ ಕುರಿತು ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಜಾರಕಿಹೊಳಿ ಅವರ ಹಸ್ತಕ್ಷೇಪಕ್ಕೆ ಪಕ್ಷದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಚುನಾವಣೆ ಸಿದ್ಧತೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿಕೊಂಡಿದ್ದಾರೆಂದು ಹೇಳಲಾಗಿದೆ.
ಇದೇ ವೇಳೆ ಬಿಜೆಪಿಯ ಇಬ್ಬರು ಶಾಸಕರು ರಮೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಪ್ರಧಾನ್ ಅವರಿಗೆ ಒತ್ತಾಯಿಸಿದ್ದು, ಅವರ ನಿರ್ಗಮನದಿಂದ ಪಕ್ಷಕ್ಕೆ ಹೆಚ್ಚು ಲಾಭವಾಗುತ್ತದೆ ಎಂದು ತಿಳಿಸಿದ್ದಾರೆಂದು ಎಂದು ಮೂಲಗಳು ತಿಳಿಸಿವೆ. ಆದರೆ ರಮೇಶ್ ಜಾರಕಿಹೊಳಿ ಕೂಡ ಪ್ರಧಾನ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆಟೋ ಚಾಲಕನ ಯಡವಟ್ಟು, ಸಂಚಾರ ವ್ಯತ್ಯಯ
ಇದೇ ವೇಳೆ ರಮೇಶ ಜಾರಕಿಹೊಳಿ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ರಾಜಕೀಯ ಪೈಪೋಟಿ ತಾರಕಕ್ಕೇರಿದ್ದು, ಗೋಕಾಕ್ ಹಾಗೂ ಬೆಳಗಾವಿ ಗ್ರಾಮಾಂತರ ಕ್ಷೇತ್ರಗಳಲ್ಲಿ ಉಭಯ ನಾಯಕರು ಪರಸ್ಪರರನ್ನು ಸೋಲಿಸುವ ಯತ್ನದಲ್ಲಿ ನಿರತರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Ramesh Jarkiholi, Meet, Amit Shah, Delhi,