ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ ಸಾಹುಕಾರ್ ಹೇಳಿಕೆ..!

ಬೆಂಗಳೂರು,ಜು.1- ಅತ್ಯಾಚಾರದ ಆರೋಪಕ್ಕೆ ಸಿಲುಕಿ ಮಂತ್ರಿ ಸ್ಥಾನ ಕಳೆದುಕೊಂಡಿರುವ ಮಾಜಿ ಸಚಿವ ರಮೇಶ್‍ಜಾರಕಿಹೊಳಿ ಎರಡು ದಿನಗಳ ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದೇನೆ ಎಂದು ಹೇಳಿರುವುದು ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಶನಿವಾರ ತಮ್ಮ ಸ್ವ ಕ್ಷೇತ್ರ ಗೋಕಾಕ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿರುವ ರಮೇಶ್ ಜಾರಕಿಹೊಳಿ, ಕೆಲವು ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನವನ್ನು ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ.

ಇದರಿಂದ ಆಡಳಿತಾರೂಢ ಬಿಜೆಪಿಯಲ್ಲಿ ಭಾರೀ ಸಂಚಲನ ಉಂಟಾಗಿದ್ದು, ಕಮಲ ಪಕ್ಷದ ನಾಯಕರು ವಿಲವಿಲನೆ ಒದ್ದಾಡುವಂತಾಗಿದೆ. ತಮ್ಮ ವಿರುದ್ಧ ಬಿಜೆಪಿಯೊಳಗೆ ಮೂವರು ಷಡ್ಯಂತ್ರ ನಡೆಸಿದ್ದಾರೆ. ವಿರೋಧ ಪಕ್ಷದ ಜತೆ ಕೈ ಜೋಡಿಸಿ ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿದ್ದಾರೆ. ಅವರ ಷಡ್ಯಂತ್ರವನ್ನು ಬಹಿರಂಗಪಡಿಸುತ್ತೇನೆ ಎಂದು ಜಾರಿಕಿಹೊಳಿ ಗುಡುಗಿದ್ದರು.

ಮೂಲಗಳ ಪ್ರಕಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿರುವ ಇಬ್ಬರು ಸಚಿವರು, ಪ್ರಭಾವಿ ಯುವ ನಾಯಕ ಹಾಗೂ ರಾಷ್ಟ್ರೀಯ ಪಕ್ಷದ ಮತ್ತೊಬ್ಬ ಮುಖಂಡನ ಹೆಸರನ್ನು ಅವರು ಬಹಿರಂಗಪಡಿಸುವ ಸಾಧ್ಯತೆ ಇದೆ. ಸಂಪುಟದಲ್ಲಿ ಪ್ರಮುಖ ಸ್ಥಾನಮಾನ ಪಡೆದಿರುವ ಸಚಿವರು ಹಾಗೂ ಮೊದಲ ಬಾರಿಗೆ ಸಂಪುಟದಲ್ಲಿ ಸ್ಥಾನ ಪಡೆದಿರುವ ಮತ್ತೊಬ್ಬರು ಇದರಲ್ಲಿ ಇದ್ದಾರೆ ಎಂಬ ಶಂಕೆ ಇದೆ.

ಇದರ ಜತೆಗೆ ಪ್ರಭಾವಿ ಯುವ ನಾಯಕನೂ ಕೂಡ ಕೈ ಜೋಡಿಸಿರುವ ಸಾಧ್ಯತೆ ಇದ್ದು, ಮೂವರು ವಿರೋಧ ಪಕ್ಷದ ಸ್ಥಾನದಲ್ಲಿರುವ ಪ್ರಮುಖರಿಗೆ ಈ ಎಲ್ಲಾ ಮಾಹಿತಿ ರವಾನಿಸಿರುವುದನ್ನು ರಮೇಶ್ ಜಾರಕಿಹೊಳಿ ಕಲೆಹಾಕಿದ್ದಾರೆ ಎನ್ನಲಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸುವ ಸಾಧ್ಯತೆ ಇದ್ದು, ಬಿಜೆಪಿಯಲ್ಲಿ ಈಗಾಗಲೇ ತಳಮಳ ಸೃಷ್ಟಿಯಾಗಿದೆ.

ಮನವೊಲಿಕೆಗೆ ಕಸರತ್ತು: ಶಾಸಕ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಬಹುದೆಂಬ ಹಿನ್ನೆಲೆಯಲ್ಲಿ ಅವರನ್ನು ಖುದ್ದು ಸಹೋದರ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವೊಲಿಸುತ್ತಿದ್ದಾರೆ. ಆತುರಕ್ಕೆ ಬಿದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಡಿ. ನಿಮ್ಮ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನಾವು ಯಾವುದೇ ರೀತಿಯ ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ನೀವು ನಿರ್ದೋಷಿ ಎಂದು ಸಾಬೀತಾದರೆ ತಕ್ಷಣವೇ ಮಂತ್ರಿಮಂಡಲಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.

ಆದರೆ, ಹಠಮಾರಿ ಸ್ವಭಾವದ ರಮೇಶ್ ಜಾರಕಿಹೊಳಿ ಯಾರ ಸಂಧಾನಕ್ಕೂ ಬಗ್ಗುತ್ತಿಲ್ಲ. ನವದೆಹಲಿಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿಯಾಗಿದ್ದರೂ ಫಲಪ್ರದಕಾರಿಯಾಗಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ನೊಂದಿರುವ ರಮೇಶ್ ಜಾರಕಿಹೊಳಿ ಶನಿವಾರ ತಮ್ಮ ಮುಂದಿನ ರಾಜಕೀಯ ತೀರ್ಮಾನವನ್ನು ಘೋಷಣೆ ಮಾಡಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.