ಪ್ರಜಾಪ್ರಭುತ್ವ ರಕ್ಷಿಸುವ ಹೊಣೆ ನನ್ನದು : ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.12 -ದೇಶ, ನ್ಯಾಯಾಂಗ, ಶಾಸಕಾಂಗ ಉಳಿಯಬೇಕು. ಸಂವಿಧಾನಾತ್ಮಕವಾಗಿ ನೇಮಕವಾದ ಒಬ್ಬ ಪ್ರತಿನಿಧಿಯಾಗಿ ಪ್ರಜಾಪ್ರಭುತ್ವದ ಘನತೆಗೆ ಕುಂದು ಬಾರದ ರೀತಿಯಲ್ಲಿ ಕೆಲಸ ಮಾಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ಸ್ಪೀಕರ್ ರಮೇಶ್‍ಕುಮಾರ್ ಹೇಳಿದರು.

ದೊಮ್ಮಲೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಮನಸ್ಸಿಗಾದ ನೋವಿಗೆ ಗೌರವ ಕೊಟ್ಟು ನನ್ನ ಕರ್ತವ್ಯದಿಂದ ವಿಮುಖನಾಗದಂತೆ ನಿರ್ವಹಿಸುವುದು ಜವಾಬ್ದಾರಿಯಾಗಿದೆ.ಸಂವಿಧಾನದ ಅಪಚಾರ ಮಾಡುವುದಿಲ್ಲ. ಅದಕ್ಕೆ ಗೌರವ ಕೊಟ್ಟು ಕೆಲಸ ಮಾಡುತ್ತೇನೆ.

ಯಾರನ್ನಾದರೂ ಖುಷಿ ಪಡಿಸಲು ಅಥವಾ ಸಂತೋಷ ಪಡಿಸಲು ನಾವು ನೃತ್ಯ ಮಾಡಲು ನೃತ್ಯಗಾರ್ತಿಯಲ್ಲ. ಸಂವಿಧಾನಾತ್ಮಕವಾಗಿ ನೇಮಕವಾದ ಒಬ್ಬ ಪ್ರತಿನಿಧಿ. ಯಾರೂ ಬೇಕಾದರೂ ಒತ್ತಡ ಹಾಕಲಿ. ನನ್ನ ಕೆಲಸ ನಾನು ಮಾಡುತ್ತೇನೆ. ಗಾಂಧೀಜಿಯವರನ್ನೇ ಕೊಂದ ದೇಶ ಇದು. ಅವರನ್ನು ನಮಸ್ಕರಿಸಿ ಕೊಂದರು. ಆದರೆ ಗಾಂಧೀಜಿಯವರ ತತ್ವಾದರ್ಶಗಳು ಸತ್ತಿವೆಯೇ ಎಂದು ಪ್ರಶ್ನಿಸಿದರು.

ಸುಪ್ರೀಂಕೋರ್ಟ್ ಏನು ತೀರ್ಮಾನ ಮಾಡುತ್ತದೋ ನೋಡೋಣ. ನಮಗೆ ಅನ್ವಯವಾಗುತ್ತದೋ ಇಲ್ಲವೋ, ನೋಡಬೇಕು. ಕೋರ್ಟ್ ಆದೇಶ ಮಾಡಿದರೆ ಅವರನ್ನೇ ಮಾಹಿತಿ ಕೇಳೋಣ ಎಂದರು. ನನ್ನ ತೇಜೋವಧೆ ಮಾಡುತ್ತಿದ್ದಾರೆ, ಮಾಡಲಿ. ಅವರಿಗೆ ಒಳ್ಳೆಯದಾಗಲಿ. ಶಾಸಕರು ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದಾರೆ. ಆ ಬಗ್ಗೆ ತೀರ್ಮಾನಮಾಡಲು ಯೋಚಿಸುತ್ತಿದ್ದೇನೆ. ಸಂವಿಧಾನಕ್ಕೆ ಅಪಚಾರ ಮಾಡಲ್ಲ ಹಾಗೂ ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದರು.

ನಿನ್ನೆ ಕ್ರಮಬದ್ಧವಾಗಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪೈಕಿ ಮೂವರು ಶಾಸಕರಿಗೆ ವೈಯಕ್ತಿಕ ಭೇಟಿಗೆ ಸಮಯ ಕೊಡಲಾಗಿದೆ. ಆನಂದ್‍ಸಿಂಗ್, ನಾರಾಯಣಗೌಡ ಹಾಗೂ ಪ್ರತಾಪ್‍ಗೌಡ ಪಾಟೀಲ್ ಅವರಿಗೆ ವೈಯಕ್ತಿಕ ಭೇಟಿಗೆ ಸಮಯಾವಕಾಶ ನೀಡಿದ್ದೇವೆ.  ಕಾಂಗ್ರೆಸ್‍ನವರು ವಿಪ್ ನೀಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ನವರು ಏನು ಮಾಡಿದ್ದಾರೋ ನನಗೇನು ಗೊತ್ತು ಎಂದು ಹೇಳಿದರು.