ಮತ ನೀಡಿದ ಜನ ಮತ್ತು ಪ್ರಜಾತಂತ್ರ ಅನಾಥ  : ಸ್ಪೀಕರ್ ರಮೇಶ್‍ಕುಮಾರ್ ವಿಷಾದ

ಬೆಂಗಳೂರು, ಜು.22- ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಮತ ನೀಡಿದ ಜನರು ಅನಾಥರು. ಪ್ರಜಾತಂತ್ರ ಅನಾಥವಾಗುತ್ತದೆ ಎಂಬುದು ನಮ್ಮ ಚಿಂತೆ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಶಾಸಕರು ಅನರ್ಹರಲ್ಲ.

ಅವರು ಸಂವಿಧಾನಬದ್ಧವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತ ಅಭ್ಯರ್ಥಿಯಾಗಿರುವವರು. ಅವರಿಗೆ ಸದನಕ್ಕೆ ಬರುವ ಹಕ್ಕಿದೆ. ಸದಸ್ಯರಾದವರ ಬಗ್ಗೆ ವಿಷಯ ಪ್ರಸ್ತಾಪಿಸಲು ಅವಕಾಶವಿದೆ. ಆದರೆ, ಸದಸ್ಯರಲ್ಲದವರ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಅವಕಾಶವಿಲ್ಲ ಎಂದರು.

ರಾಜೀನಾಮೆ ನೀಡಿರುವ ಶಾಸಕರ ವಿಚಾರದಲ್ಲಿ ವಾಸನೆ ಹೊರ ಬರುತ್ತಿದೆ. ಹೊರಗಿನವರಿಗೆ ಏನು ಮಾಡುತ್ತಿದ್ದಾರೆ ಎಂಬ ಕುತೂಹಲವಿದೆ. ಸ್ವಾತಂತ್ರ್ಯ ಬಂದ ನಂತರ ಇಂತಹ ದಯನೀಯ ಸ್ಥಿತಿ ನಮಗೆ ಬಂದಿರಲಿಲ್ಲ. ಈ ರೀತಿ ನಡವಳಿಕೆಯಾದರೆ ಯಾರಿಗಾದರೂ ಗೌರವ ಬರುತ್ತದೆಯೇ? ಸಚಿವರ ವಿರುದ್ಧ ಆರೋಪದ ವಿಚಾರ ಪ್ರಸ್ತಾಪವಾದಾಗ ಆಡಿಯೋ ಮತ್ತು ವೀಡಿಯೋ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಈಗ ಸಚಿವ ಕೃಷ್ಣಬೈರೇಗೌಡ ಅವರು ಪ್ರಸ್ತಾಪಿಸುತ್ತಿರುವ ವಿಚಾರದಲ್ಲೂ ಅವರು ಪೂರಕ ದಾಖಲೆಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಕಡತದಿಂದ ತೆಗೆಯಲಾಗುವುದು ಎಂದು ಹೇಳಿದರು. ಮಂತ್ರಿಗಳ ವಿಚಾರದಲ್ಲಿ ಆರೋಪ ಮಾಡುವುದಾದರೆ ಮುಂಚೆಯೇ ನೋಟಿಸ್ ಕೊಡಬೇಕು ಎಂದಾಗ ಆಡಳಿತ ಪಕ್ಷದ ಶಾಸಕರು ಮೇಜು ಕುಟ್ಟಿದರು. ಸಿಟ್ಟಿಗೆದ್ದ ಸಭಾಧ್ಯಕ್ಷರು ಏಕೆ ಚಪ್ಪಳೆ ಹೊಡೆಯುತ್ತೀರಿ. ಒಮ್ಮೆ ನೀವು, ಮತ್ತೊಮ್ಮೆ ಅವರು. ಹೊರಗಡೆ ಜನ ಕಪಾಳಕ್ಕೆ ಹೊಡೆಯುತ್ತಾರೆ ಎಂದರು.

ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಯಾರಮೇಲಾದರೂ ಆರೋಪ ಮಾಡುವುದಾದರೆ ಮೊದಲು ನೋಟಿಸ್ ಕೊಟ್ಟು ಪೂರಕ ದಾಖಲೆ ನೀಡಬೇಕು. ಬೇಜವಾಬ್ದಾರಿ ಆರೋಪ ಮಾಡಿದರೆ ಅರ್ಥವಿದೆಯೇ? ಶಾಸಕ ಬಿ.ಸಿ.ಪಾಟೀಲ್ ಅವರು ಗೈರು ಹಾಜರಾಗಿದ್ದಾರೆ. ಅವರ ಮೇಲೆ ಆರೋಪ ಮಾಡಿದರೆ ಸಮರ್ಥನೆ ಮಾಡಿಕೊಳ್ಳಲು ಅವರು ಸದನದಲ್ಲಿ ಇಲ್ಲ ಎಂದಾಗ ಆಡಳಿತ ಪಕ್ಷದ ಸಚಿವರು, ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು, ತಾವು ಮಾಡುತ್ತಿರುವ ಆರೋಪದ ಬಗ್ಗೆ ಸಂಭಾಷಣೆಯ ಮಾಹಿತಿಯನ್ನು ಪೆನ್‍ಡ್ರೈವ್‍ಗೆ ಹಾಕಿ ಸಂಜೆಯೊಳಗೆ ಸಭಾಧ್ಯಕ್ಷರಿಗೆ ನೀಡುವುದಾಗಿ ಹೇಳಿದರು.