‘ಪರಮ’ಪ್ತ ರಮೇಶ್ ಆತ್ಮಹತ್ಯೆ ತನಿಖೆ ಆರಂಭ

ಬೆಂಗಳೂರು,ಅ.13- ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಆರಂಭಿಸಿದ್ದಾರೆ. ಈಗಾಗಲೇ ರಮೇಶ್ ಕುಟುಂಬ ವರ್ಗ, ಸ್ನೇಹಿತರು, ಪರಿಚಿತರನ್ನು ಪೊಲೀಸರು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಆತ್ಮಹತ್ಯೆಗೂ ಮುನ್ನ ರಮೇಶ್ ಅವರು ಕಾರಿನಲ್ಲಿ ಬರೆದಿಟ್ಟಿದ್ದ ಡೆತ್‍ನೋಟ್‍ನಲ್ಲಿ ಕಂಡುಬಂದಿರುವ ಅಂಶಗಳ ಬಗ್ಗೆಯೂ ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ನಿನ್ನೆ ಘಟನಾ ಸ್ಥಳಕ್ಕೆ ಎಫ್‍ಎಸ್‍ಎಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವರ ವರದಿಗಾಗಿ ಕಾಯಲಾಗುತ್ತಿದೆ. ಅಲ್ಲದೆ ಇಂದು ರಮೇಶ್ ಅವರ ಹುಟ್ಟೂರು ಮೇಳಹಳ್ಳಿಯಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರಷ್ಟೇ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ.

ಐಟಿ ದಾಳಿ ಭೀತಿಯಿಂದ ಮರ್ಯಾದೆಗೆ ಅಂಜಿ ರಮೇಶ್ ಅವರು ಜ್ಞಾನಭಾರತಿ ಕಾಂಪ್ಯಸ್ ಆವರಣದಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.  ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜ್ಞಾನಭಾರತಿ ಠಾಣೆ ಪೆÇಲೀಸರು ಎಲ್ಲಾ ಆಯಾಮಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.