ಕಾರಿನ ಗಾಜು ಒಡೆದು ಕಳವು ಮಾಡುತ್ತಿದ್ದ ರಾಮ್‍ಜೀ ಗ್ಯಾಂಗ್‍ನ ಇಬ್ಬರು ಅಂದರ್

Social Share

ಬೆಂಗಳೂರು,ಆ.5- ಗಮನವನ್ನು ಬೇರೆ ಕಡೆ ಸೆಳೆದು ಕ್ಷಣಾರ್ಧದಲ್ಲಿ ಕಾರು ಗಾಜುಗಳನ್ನು ಒಡೆದು ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ರಾಮ್‍ಜೀ ನಗರ ಗ್ಯಾಂಗ್‍ನ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಬಂಡೆಪಾಳ್ಯ ಠಾಣೆ ಪೊಲೀಸರು ಬಂಧಿಸಿ 1.10 ಲಕ್ಷ ನಗದು ಸೇರಿದಂತೆ 11 ಲಕ್ಷ ರೂ. ಮೌಲ್ಯದ ಲ್ಯಾಪ್‍ಟಾಪ್‍ಗಳು, ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಟರಾಜ್ ಮತ್ತು ಗೋಕುಲ್ ಬಂತ ಆರೋಪಿಗಳು. ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ಗಮನಿಸಿ ಮಾಲೀಕರ ಗಮನವನ್ನು ಬೇರೆ ಕಡೆ ಸೆಳೆದು ಕ್ಷಣಾರ್ಧದಲ್ಲಿ ಅವುಗಳ ಗಾಜುಗಳನ್ನು ಒಡೆದು ಬೆಲೆಬಾಳುವ ಮೊಬೈಲ್‍ಫೋನ್‍ಗಳು, ಲ್ಯಾಪ್‍ಟಾಪ್, ಹಣ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಪ್ರಕರಣಗಳು ನಗರಾದ್ಯಂತ ವರದಿಯಾಗುತ್ತಿದ್ದವು.

ಅದೇ ರೀತಿ ಬಂಡೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಜುಲೈ 16ರಂದು ಸಂಜೆ 6.30ರ ಸುಮಾರಿನಲ್ಲಿ ಪವನ್ ಎಂಬುವರು ತಮ್ಮ ಕ್ವಿಡ್ ಕಾರ್‍ನ್ನು ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದಾಗ ದುಷ್ಕರ್ಮಿಗಳು ಕಾರಿನ ಗಾಜು ಒಡೆದು ಅದರಲ್ಲಿದ್ದ 2 ಲ್ಯಾಪ್‍ಟಾಪ್, ಸ್ಯಾಮ್‍ಸಂಗ್ ಮೊಬೈಲ್, ಹಣ ಹಾಗೂ ಇತರೆ ದಾಖಲಾತಿಗಳಿದ್ದ ಬ್ಯಾಗ್‍ನ್ನು ಕಳವು ಮಾಡಿಕೊಂಡು ಹೋಗಿದ್ದರು.

ಈ ಸಂಬಂಧ ಬಂಡೆಪಾಳ್ಯ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ಪ್ರಕರಣದ ಪತ್ತೆಗಾಗಿ ಇನ್‍ಸ್ಪೆಕ್ಟರ್ ರಾಜೇಶ್, ಪರಪ್ಪನ ಅಗ್ರಹಾರ ಠಾಣೆ ಇನ್‍ಸ್ಪೆಕ್ಟರ್ ಸಂದೀಪ್ ಅವರ ಸಾರಥ್ಯದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯ ತಂಡವನ್ನು ರಚಿಸಲಾಗಿತ್ತು.

ಈ ತಂಡವು ಕಾರ್ಯಾಚರಣೆ ಕೈಗೊಂಡು ಆರೋಪಿಗಳ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ತಮಿಳುನಾಡಿನ ತಿರುಚಿ ಜಿಲ್ಲೆಯ ರಾಮ್‍ಜೀನಗರದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 1.10 ಲಕ್ಷ ನಗದು, 11 ಲಕ್ಷ ರೂ. ಮೌಲ್ಯದ 8 ಲ್ಯಾಪ್‍ಟಾಪ್‍ಗಳು, ಮೊಬೈಲ್, ಕ್ಯಾಮೆರಾ ವಶಪಡಿಸಿಕೊಂಡಿದ್ದು, ಅ ವುಗಳ ಒಟ್ಟು ಮೌಲ್ಯ 12.10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಪ್ರಕರಣದಲ್ಲಿ ಇನ್ನು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರೆದಿದೆ. ಆರೋಪಿಗಳ ಬಂಧನದಿಂದ ಬಂಡೆಪಾಳ್ಯ ಠಾಣೆಯ ಒಂದು ಪ್ರಕರಣ, ಎಚ್‍ಎಸ್‍ಆರ್ ಲೇಔಟ್ ಠಾಣೆಯ 2 ಪ್ರಕರಣ, ಕೋರಮಂಗಲ ಹಾಗೂ ಹೈಗ್ರೌಂಡ್‍ಠಾಣೆಯ ತಲಾ 1 ಪ್ರಕರಣ ಸೇರಿ ಒಟ್ಟು 5 ಕಳವು ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ.

ಈ ಆರೋಪಿಗಳು ರಾಮ್‍ಜೀ ನಗರ ಗ್ಯಾಂಗ್‍ಗೆ ಸೇರಿದವರಾಗಿದ್ದು,ಈ ಗ್ಯಾಂಗ್ ಭಾರತಾದ್ಯಂತ ಕಳವು ಮಾಡುವಲ್ಲಿ ಕುಖ್ಯಾತಿ ಗಳಿಸಿದೆ. ಇವರು ತಂಡ ತಂಡವಾಗಿ ತೆರಳಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುತ್ತಾ ಕಳವು ಮಾಡುವ ಪ್ರವೃತ್ತಿಯುಳ್ಳವಾಗಿದ್ದಾರೆ.

ಆರೋಪಿಗಳು ಅಂತಾರಾಜ್ಯ ಆರೋಪಿಗಳಾಗಿದ್ದು, ಇವರ ವಿರುದ್ಧ ತಮಿಳುನಾಡು, ರಾಜಸ್ಥಾನ ಹಾಗೂ ಇತರೆ ರಾಜ್ಯಗಳಲ್ಲಿಯೂ ಸಹ ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಪತ್ತೆ ಕಾರ್ಯವನ್ನು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರ ರಾವ್ ಮತ್ತು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರು ಶ್ಲಾಘಿಸಿರುತ್ತಾರೆ.

Articles You Might Like

Share This Article