ಸಿಎಂ ಬೊಮ್ಮಾಯಿ ವಿರುದ್ದ ಕೇಸ್ ದಾಖಲಿಸುವಂತೆ ಸುರ್ಜೆವಾಲ ಒತ್ತಾಯ

Social Share

ಬೆಂಗಳೂರು,ನ.26-ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿನ ಮತದಾರರ ಪಟ್ಟಿಯ ಅಕ್ರಮಗಳ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ಕಾಂಗ್ರೆಸ್ ವತಿಯಿಂದ ನೀಡಲಾದ ದೂರಿನ ಮೇಲೆ ಚುನಾವಣಾ ಆಯೋಗ ತ್ವರಿತ ಕ್ರಮ ಕೈಗೊಂಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ ತನಿಖೆಯನ್ನು ಕೇವಲ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ, ಮತದಾರರ ಹಕ್ಕು ನಿರಾಕರಣೆ ಸೇರಿದಂತೆ ಗಂಭೀರ ಸ್ವರೂಪದ ಅಕ್ರಮಗಳು ನಡೆದಿವೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾರರ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಹೀಗಾಗಿ ತನಿಖೆ ಸೀಮಿತಗೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

ನಾಲ್ವರ ಬಂಧನ : 15.53ಲಕ್ಷ ಮೌಲ್ಯದ ಚಿನ್ನಾಭರಣ, ವಾಹನಗಳ ವಶ

ಈ ಹಗರಣದಲ್ಲಿ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಮುಖ್ಯಮಂತ್ರಿಗಳ ಪಾತ್ರ ಪ್ರಮುಖವಾಗಿದೆ. ಹೀಗಾಗಿ ನಿಷ್ಪಕ್ಷಪಾತ ಮತ್ತು ನ್ಯಾಯಯುತ ತನಿಖೆಗೆ ಮುಖ್ಯಮಂತ್ರಿ ವಿರುದ್ಧ ಎಫ್‍ಐಆರ್ ದಾಖಲಿಸಬೇಕು. ಸಂಗ್ರಹಿಸಲಾದ ದತ್ತಾಂಶವನ್ನು ಖಾಸಗಿ ಆ್ಯಪ್‍ಗೆ ಅಪ್‍ಲೋಡ್ ಮಾಡಲಾಗಿದೆ. ಈ ಮೂಲಕ ದತ್ತಾಂಶ ಅಕ್ರಮವಾಗಿ ಮಾರಾಟವಾಗಿದೆ ಎಂದು ಆಗ್ರಹಿಸಿದ್ದಾರೆ.

ಚಿಲುಮೆ ಸಂಸ್ಥೆ 10 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಂಡು ಅಕ್ರಮವಾಗಿ ದತ್ತಾಂಶ ಸಂಗ್ರಹಿಸಿದೆ. ಇದಕ್ಕಾಗಿ ಉಪಗುತ್ತಿಗೆಯನ್ನೂ ನೀಡಿದೆ. ಇಷ್ಟು ಮಂದಿ ಸಿಬ್ಬಂದಿಗಳಿಗೆ ವೇತನ ನೀಡಲು ಹಣ ಎಲ್ಲಿಂದ ಬಂತು? ಪ್ರಮುಖ ಆರೋಪಿ ರವಿಕುಮಾರ್ ಅವರು ಅಮಾಯಕ ಗ್ರಾಮಸ್ಥರ ವಿವಿಧ ಖಾತೆಗಳ ಹೆಸರಿನಲ್ಲಿ ಕೇಂದ್ರ ಸರ್ಕಾರದ ಅನುದಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಗುಂಡಿಮಯವಾದ ಮೆಜೆಸ್ಟಿಕ್ : ಚಾಲಕರು, ಪ್ರಯಾಣಿಕರ ಪರದಾಟ

ಹಣ ವರ್ಗಾವಣೆಯಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟವಾಗಿದ್ದು, ರೈತರಿಗೂ ವಂಚನೆಯಾಗಿದೆ. ಈ ಹಗರಣವನ್ನು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳು ತನಿಖೆ ನಡೆಸಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಕೇಂದ್ರ ತನಿಖಾ ಸಂಸ್ಥೆಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಯೊಬ್ಬ ಕನ್ನಡಿಗನ ಮತದಾನದ ಹಕ್ಕನ್ನು ರಕ್ಷಿಸುವ ಹೊಣೆಗಾರಿಕೆ ಚುನಾವಣಾ ಆಯೋಗದ ಮುಂದಿದ್ದು, ಪ್ರಜಾಪ್ರಭುತ್ವದಲ್ಲಿ ಇದು ಅನಿವಾರ್ಯವಾಗಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ತಪ್ಪು ಮಾಡಿ ನೇರವಾಗಿ ಸಿಕ್ಕಿಬಿದ್ದಿದೆ. ಹೀಗಾಗಿ ತನಿಖೆ ಸರಿಯಾದ ರೀತಿಯಲ್ಲಿ ನಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

randeep surjewala, CM Bommai, Bengaluru, Voter, Data, Theft,

Articles You Might Like

Share This Article