ಬೆಂಗಳೂರು,ಅ.2- ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಕಿತ್ತೂರು ರಾಣಿ ಚೆನ್ನಮ್ಮ ಹಾಗು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಿತ್ತೂರು ಉತ್ಸವದ ಪೂರ್ವಭಾವಿಯಾಗಿ ಕಿತ್ತೂರು ಚೆನ್ನಮ್ಮಾಜಿ ವಿಜಯ ಜ್ಯೋತಿಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದ ಪ್ರಥಮ ಮಹಿಳೆ ಎಂಬುದರಲ್ಲಿ ಅನುಮಾನವಿಲ್ಲ. ಈ ವಿಚಾರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ದಾಖಲಿಸಲಾಗಿದ್ದು, ಅದನ್ನು ಕೇಂದ್ರದ ಗೆಜೆಟಿಯರ್‍ನಲ್ಲಿಯೂ ಸೇರಿಸುವ ಪ್ರಯತ್ನ ಮಾಡುತ್ತೇವೆ. ಕಿತ್ತೂರು ಅರಮನೆಯನ್ನು ಪುನರುಜ್ಜೀವನ ಮಾಡಲಾಗುವುದು ಎಂದರು.
ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಕಿತ್ತೂರು ರಾಣಿ, ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ, ಹೊನಕೆ ಓಬವ್ವ ಎಲ್ಲರ ಜೀವನ ಚರಿತ್ರೆಯನ್ನು ಸ್ಮರಣೀ ಮಾಡುವ ಕೆಲಸ ಮಾಡಲಾಗುವುದು ಎಂದರು. ಪ್ರಧಾನಿ ನರೇಂದ್ರಮೋದಿ ಅವರು ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮುಂದಿನ 25 ವರ್ಷ ಅಮೃತ ಕಾಲ ಎಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲ ಕೆಲಸ ಮಾಡುತ್ತಿದ್ದೇವೆ ಎಂದರು.
ಕಿತ್ತೂರು ಉತ್ಸವ ಪ್ರಾರಂಭವಾಗಿ 25 ವರ್ಷ ಕಳೆದಿದೆ. ರಾಜ್ಯಮಟ್ಟದ ಕಿತ್ತೂರು ಉತ್ಸವ ಆಚರಿಸಲು ಆದೇಶ ಮಾಡಲಾಗಿದೆ. ಬೆಳಗಾವಿ ಉಸ್ತುವಾರಿ ಸಚಿವರಾಗಿದ್ದಾಲೇ ಹೆಚ್ಚಿನ ಅನುದಾನ ಪಡೆದು ಉತ್ಸವ ಆಚರಿಸಲಾಗಿತ್ತು. ಕಿತ್ತೂರು ಅಭಿವೃದ್ದಿ ಪ್ರಾಕಾರವನ್ನು ಪ್ರಾರಂಭಿಸಲಾಗಿದೆ ಎಂದರು.