ಪಡಿಕ್ಕಲ್ ಆಕರ್ಷಕ ಬ್ಯಾಟಿಂಗ್ ಬೃಹತ್ ಮೊತ್ತದತ್ತ ಕರ್ನಾಟಕ

Social Share

ಚೆನ್ನೈ,ಮಾ.3- ಜಮ್ಮು ಕಾಶ್ಮೀರ ವಿರುದ್ದ 117 ರನ್‍ಗಳ ಬೃಹತ್ ಮೊತ್ತದಿಂದ ಗೆಲುವು ಸಾಧಿಸಿ ಎಲೆಟ್ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಮನೀಷ್ ಪಾಂಡೆ ಸಾರಥ್ಯದ ಕರ್ನಾಟಕ ತಂಡವು ಇಂದು ಪುದುಚೇರಿಯ ಸವಾಲನ್ನು ಎದುರಿಸುತ್ತಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡವು ಆರಂಭದಲ್ಲಿ ತಾಳ್ಮೆಯುತ ಆಟಕ್ಕೆ ಮುಂದಾದರೂ ಕೂಡ ಪುದುಚೇರಿಯ ವೇಗದ ಬೌಲರ್ ಸಂಗನ್‍ಕಾಲ್ ಅವರ ಬೌಲಿಂಗ್ ಸಿಲುಕಿ 39 ರನ್‍ಗಳಾಗುವಷ್ಟರಲ್ಲೇ ಪ್ರಮುಖ 2 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಕರ್ನಾಟಕದ ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ ಅವರು 1 ಬೌಂಡರಿ ಸಹಿತ 11 ರನ್‍ಗಳಿಸಿದ್ದಾಗ ಸಂಗನ್‍ಕಾಲ್‍ರ ಎಸೆತವನ್ನು ಬೌಂಡರಿ ಗೆರೆಗೆ ಅಟ್ಟುವ ಆತುರದಲ್ಲಿ ವಿಕೆಟ್ ಕೀಪರ್ ಕಾರ್ತಿಕ್‍ಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡದಿದರೆ, ಜಮ್ಮು ಕಾಶ್ಮೀರ ವಿರುದ್ಧ ಆಕರ್ಷಕ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಕರುಣ್‍ನಾಯರ್ ಕೇವಲ 6 ರನ್‍ಗಳಿಗೆ ತನ್ನ ಆಟವನ್ನು ಮುಗಿಸಿದರು.
# ಪಡಿಕ್ಕಲ್ ಅಬ್ಬರ:
39 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರು ಆಸರೆಯಾದರು. 3ನೆ ವಿಕೆಟ್‍ಗೆ ಕೃಷ್ಣಮೂರ್ತಿ ಸಿದ್ಧಾರ್ಥ್‍ರೊಂದಿಗೆ ಜೊತೆಗೂಡಿದ ದೇವದತ್‍ಪಡಿಕ್ಕಲ್ ಪುದುಚೇರಿಯ ವೇಗಿ ಹಾಗೂ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಗಳಿಸುವ ಆಸೆ ಮೂಡಿಸಿದರು.
ದೇವದತ್ ಪಡಿಕ್ಕಲ್ ಅವರು ತಾಳ್ಮೆಯುತ ಆಟವನ್ನು ಪ್ರದರ್ಶಿಸುತ್ತಾ ಅವಕಾಶ ಸಿಕ್ಕಾಗಲೆಲ್ಲ ಚೆಂಡನ್ನು ಬೌಂಡರಿ ಗೆರೆಗೆ ಮುಟ್ಟಿಸುತ್ತಾ ಗಮನ ಸೆಳೆದರು. ಮತ್ತೊಂದು ತುದಿಯಲ್ಲಿ ಕೃಷ್ಣಮೂರ್ತಿ ಸಿದ್ಧಾರ್ಥ್ ಕೂಡ ಪಡಿಕ್ಕಲ್ ಉತ್ತಮ ಸಾಥ್ ನೀಡಿದರು.
ಪತ್ರಿಕೆಯು ಮುದ್ರಣಕ್ಕೆ ಹೋಗುವ ವೇಳೆಗೆ ಕರ್ನಾಟಕ ತಂಡವು 33 ಓವರ್‍ಗಳಲ್ಲಿ 2 ವಿಕೆಟ್‍ಗಳನ್ನು ಕಳೆದುಕೊಂಡು 88 ರನ್ ಗಳಿಸಿದ್ದು 47 ರನ್ ಗಳಿಸಿರುವ ಪಡಿಕ್ಕಲ್ ಹಾಗೂ 23 ರನ್‍ಗಳಿಸಿದ್ದ ಕೃಷ್ಣಮೂರ್ತಿ ಸಿದ್ಧಾರ್ಥ್ ಅವರು ಕ್ರೀಸ್‍ನಲ್ಲಿದ್ದರು.

Articles You Might Like

Share This Article