ಪಣಜಿ,ಜ.29-ಗೋವಾದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಇತ್ತು ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಗೋವಾದ ಪಣಜಿಯಲ್ಲಿ ಪ್ರತಿಕ್ರಿಯಿಸಿದ ಸಿ. ಟಿ ರವಿ ಅವರು, ಡಿಕೆಶಿ ಮಾಡಿರುವ ಆರೋಪ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ. ಸ್ವತಃ ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿದ್ದ ಡಿಕೆಶಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹೀಗಿದ್ದರೂ, ಅವರ ಬಾಯಲ್ಲಿ ಭ್ರಷ್ಟಾಚಾರ ಬಗ್ಗೆ ಮಾತು ಬರುತ್ತಿವೆ. ಭೂತದ ಬಾಯಲ್ಲಿ ಬರುವ ಭಗವದ್ಗೀತೆಗೂ, ಡಿಕೆಶಿ ಬಾಯಲ್ಲಿ ಬರುವ ಭ್ರಷ್ಟಾಚಾರದ ಮಾತಿಗೂ ಏನೂ ವ್ಯತ್ಯಾಸವಿಲ್ಲ. ಎರಡೂ ಒಂದೇ ರೀತಿ ಇದೆ. ತನ್ನಂತೆಯೇ ಎಲ್ಲರಿದ್ದಾರೆ ಎಂದು ಅವರು ಭಾವಿಸಿಕೊಂಡಿದ್ದಾರೆಂದು ಕಿಡಿಕಾರಿದರು.
ಗೋವಾದಲ್ಲಿ ಬಿಜೆಪಿಯ ಮನೋಹರ್ ಪರಿಕ್ಕರ್, ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರ ಒಳ್ಳೆಯ ಆಡಳಿತ ಕೊಟ್ಟಿದೆ. ಇದು ಹಳೆ ಗೋವಾ ಅಲ್ಲ, ಹೊಸ ಗೋವಾ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಗೋವಾ ಎಂದು ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಠಕ್ಕರ್ ಕೊಟ್ಟರು.
ಇಲ್ಲಿ ಫ್ಲೈಓವರ್ ನೋಡಲು ಸಿಕ್ಕಿದೆ. ಆ.15ರಂದು ಲೋಕಾರ್ಪಣೆಯಾಗುವ ಹೊಸ ಏರ್‍ಫೋರ್ಟ್ ಬಿಜೆಪಿ ಸರ್ಕಾರದ ಕೊಡುಗೆ. ಐಐಟಿ, ವೈದ್ಯಕೀಯ ಕಾಲೇಜು ಇವೆಲ್ಲ ಬಿಜೆಪಿ ಸರ್ಕಾರದ ಕೊಡುಗೆ. ಆದರೆ ಕಾಂಗ್ರೆಸ್ ಅಂದರೆ ಭ್ರಷ್ಟಾಚಾರದ ಕೂಪ. ಕಾಂಗ್ರೆಸ್ ಅಂದರೆ ವಂಶವಾದ ಬೆಳೆಸುವಂತಹ, ಜನಸಾಮಾನ್ಯರಿಗೆ ಅವಕಾಶ ನೀಡದ ಪಕ್ಷ ಎಂದು ಹೇಳಿದರು.
ನಮ್ಮ ಬಿಜೆಪಿ ಪಕ್ಷ ಸಾಮಾನ್ಯ ಜನರಲ್ಲಿ ರಾಜಕೀಯ ನಾಯಕತ್ವ ಬೆಳೆಸುತ್ತದೆ. ಹೀಗಾಗಿ ಕಾಂಗ್ರೆಸ್‍ನಿಂದ ಗೋವಾ ಜನತೆ ಪಾಠ ಹೇಳಿಸಿಕೊಳ್ಳುವಂತಹ ಸ್ಥಿತಿ ಇಲ್ಲ. ಡಿಕೆಶಿ ಅಲ್ಲ, ಇನ್ನೂ ನೂರು ಜನ ಬರಲಿ, ಗೋವಾದಲ್ಲಿ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ. ಬಂದ ದಾರಿಗೆ ಸುಂಕ ಇಲ್ಲವೆಂದು ಅವರು ವಾಪಸ್ ಹೋಗಬೇಕು ಎಂದು ತಿರುಗೇಟು ನೀಡಿದರು.
