ಮಾ.7ರವರೆಗೆ ರವಿಪೂಜಾರಿ ಪೊಲೀಸ್ ಕಸ್ಟಡಿಗೆ

ಬೆಂಗಳೂರು, ಫೆ.24-ಭೂಗತ ಪಾತಕಿ, ಮೋಸ್ಟ್ ವಾಟೆಂಡ್ ನಟೋರಿಯಸ್ ರವಿ ಪೂಜಾರಿಯನ್ನು ಪೊಲೀಸರು ನಿನ್ನೆ ತಡರಾತ್ರಿ ಆಫ್ರಿಕಾದ ಸೆನೆಗಲ್‍ನಿಂದ ಬೆಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಿದ್ದು ನ್ಯಾಯಾಲಯ ಆತನನ್ನು ಮಾ.7ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. 10ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀ ಶರಾದ ಜಗದೀಶ್ ಅವರು, ರವಿ ಪೂಜಾರಿಯನ್ನು ಮಾ.7ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ರವಿ ಪೂಜಾರಿಯ ಮೇಲೆ ಗಂಭೀರ ಸ್ವರೂಪದ ನಾನಾ ಪ್ರಕರಣಗಳಿರುವುದರಿಂದ ಹೆಚ್ಚಿನ ವಿಚಾರಣೆಗೆ ಮಾ.9ರ ತನಕ ನಮ್ಮ ವಶಕ್ಕೆ ನೀಡಬೇಕೆಂದು ಸರ್ಕಾರಿ ಪರ ಅಭಿಯೋಜಕರು ಪ್ರಬಲವಾದ ಮಂಡಿಸಿದರು. ರವಿ ಪೂಜಾರಿ ಪರ ವಕೀಲ ಬಿಲ್ಲರಾಜ್ ಪ್ರತಿವಾದ ಮಂಡಿಸಿದರು.  ವಾದ ವಿವಾದ ಆಲಿಸಿದ ನ್ಯಾಯಾಲಯ ಮಾ.7ರವರೆಗೆ ರವಿ ಪೂಜಾರಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

2018ರಲ್ಲಿ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್‍ನಲ್ಲಿ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು. ಈತನನ್ನು ತಮ್ಮ ಸುಪರ್ದಿಗೆ ಪಡೆಯಲು ರಾಜ್ಯ ಪೊಲೀಸರು ಪ್ರಯತ್ನ ನಡೆಸಿದ್ದರು. ಆದರೆ, ಕಾನೂನು ತೊಡಕುಗಳಿಂದ ಹಸ್ತಾಂತರ ವಿಳಂಬವಾಗಿತ್ತು. ಈಗ ಈ ಕಾನೂನು ತೊಡಕು ನಿವಾರಣೆ ಆಗಿದ್ದು, ರವಿಯನ್ನು ತಡರಾತ್ರಿಯೇ ಬೆಂಗಳೂರಿಗೆ ಕರೆತರಲಾಗಿತ್ತು.

90ರ ದಶಕದಲ್ಲಿ ಭೂಗತ ಲೋಕದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದ ರವಿ ಪೂಜಾರಿ ದುಬೈನಲ್ಲಿ ಕುಳಿತೇ ಮುಂಬೈ, ಮಂಗಳೂರು ಮತ್ತು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಎನ್ನಲಾಗಿದೆ. ಸುಮಾರು 15 ವರ್ಷಗಳಿಂದ ರವಿ ಪೂಜಾರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.