ಆಮ್ ಆದ್ಮಿ ಪಕ್ಷ ಸೇರಿದ ನಿವೃತ್ತ KAS ಅಧಿಕಾರಿ ರವಿಶಂಕರ್

ಬೆಂಗಳೂರು, ಜು.17- ರಾಜ್ಯದ ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಕಾಳಜಿಯುಳ್ಳ ನಾಯಕ ಎಂ.ರವಿಶಂಕರ್ ಅವರು ಇಂದು ಆಮ್ ಆದ್ಮಿ ಪಾರ್ಟಿ ಸೇರಿದ್ದಾರೆ.  ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಎಂ.ರವಿಶಂಕರ್ ಅವರು ಮೂಲತಃ ಕೋಲಾರ ಜಿಲ್ಲಾಯ ಮಾಲೂರಿನವರು. ಬಿಇ ಹಾಗೂ ಸ್ನಾತಕೋತ್ತರ ಪದವೀಧರರಾದ ಇವರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಕೆಎಎಸ್ ಅಧಿಕಾರಿಯಾಗಿ 38 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.

ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಅರಮನೆಯ ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದಿ. ಲೋಕಸೇವಾಸಕ್ತ ವೇಮರೆಡ್ಡಿ ಅವರ ವಂಶಸ್ಥರು. ಇವರ ಸೋದರ ಮಾವನವರಾದ ಪಿ.ಎನ್.ರೆಡ್ಡಿ ಅವರು ಮಾಲೂರು ಕ್ಷೇತ್ರದ ಶಾಸಕರಾಗಿ ಜನಪರ ಸೇವೆ ಸಲ್ಲಿಸಿದ್ದರು. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ರವಿಶಂಕರ್ ಅವರು ಅವರ ಖಾಸಗಿ ಕಾರ್ಯದರ್ಶಿಯಾಗಿದ್ದರು. ಹೀಗೆ ಅಪಾರ ರಾಜಕೀಯ ಅನುಭವ ಹೊಂದಿರುವ ಇವರ ಸೇರ್ಪಡೆಯಿಂದ ಎಎಪಿ ಬಲ ಇನ್ನಷ್ಟು ಹೆಚ್ಚಾಗಲಿದೆ.

ಎಂ.ರವಿಶಂಕರ್ ಅವರು ಮಾಲೂರು ತಾಲೂಕಿನ ಲಕ್ಕೂರು ಹೋಬಳಿಯಲ್ಲಿ ಪಿಪಿಎಂ ಶಾಲೆ ನಡೆಸಿ, ಶೈಕ್ಷಣಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಇದರಿಂದ ಕೋಲಾರ ಜಿಲ್ಲಾಯಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಇವರ ಶಾಲೆ ಹೆಸರಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಲಾಗುತ್ತಿದೆ. ಈ ಹಿಂದೆ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಹತ್ತಾರು ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿಯ ತಾಂತ್ರಿಕ ಸಮಿತಿ ಹಾಗೂ ಅಬಕಾರಿ ಇಲಾಖೆಯ ತಾಂತ್ರಿಕ ತಜ್ಞ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ, ಕರ್ನಾಟಕ ರಾಜ್ಯ ಗ್ರೂಪ್-ಎ ಗೆಜೆಟೆಡ್ ಅಧಿಕಾರಿಗಳ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಸರ್ಕಾರಿ ಪ್ರೆಸ್ ದಿನಗೂಲಿ ಮತ್ತು ಗುತ್ತಿಗೆ ನೌಕರರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಮ್ ಆದ್ಮಿ ಪಾರ್ಟಿಯ ಜನಪರ ತತ್ತ ್ವ ಸಿದ್ಧಾಂತಗಳು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರರಹಿತ ಆಡಳಿತವನ್ನು ಒಪ್ಪಿ ಅನೇಕ ಅಧಿಕಾರಿಗಳು, ಸಮಾಜ ಸೇವಕರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಪಕ್ಷವನ್ನು ಸೇರಿದ್ದಾರೆ. ಮುಂದೆಯೂ ಅನೇಕ ಗಣ್ಯರು ಸೇರಲಿದ್ದಾರೆ. ಎಎಪಿಗೆ ಕರ್ನಾಟಕದಲ್ಲಿ ನಿರೀಕ್ಷೆಗೂ ಮೀರಿದ ಜನಬೆಂಬಲ ದೊರೆಯುತ್ತಿರುವುದು ನಮ್ಮೆಲ್ಲರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಈಗ ಸೇರ್ಪಡೆಗೊಂಡಿರುವ ಎಂ.ರವಿಶಂಕರ್ ಅವರ ಶ್ರಮ-ಸಲಹೆ-ಸೂಚನೆಗಳೊಂದಿಗೆ ಪಕ್ಷವು ಇನ್ನಷ್ಟು ಭದ್ರವಾಗಿ ಬೇರೂರುವ ದೃಢ ವಿಶ್ವಾಸವಿದೆ ಎಂದು ಎಎಪಿ ಪಕ್ಷದ ಕರ್ನಾಟಕ ಉಸ್ತುವಾರಿ ರೋಮಿ ಭಾಟಿ ಹೇಳಿದರು. ಪಕ್ಷಕ್ಕೆ ಸೇರ್ಪಡೆಯಾದ ರವಿಶಂಕರ್ ಅವರು ಈ ಸಂಜೆಯೊಂದಿಗೆ ಮಾತನಾಡಿ, ಪ್ರಸ್ತುತ ಇರುವ ರಾಜಕೀಯ ಪಕ್ಷಗಳಲ್ಲಿ ಪ್ರಾಮಾಣಿಕ ಪಕ್ಷವಾಗಿ ಇರುವ ಪಕ್ಷವೆಂದರೆ ಅದು ಆಮ್ ಆದ್ಮಿ ಪಕ್ಷ. ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಪಕ್ಷವಾಗಿದೆ.

ನಾವು ಹೊರಗೆ ಇದ್ದುಕೊಂಡು ರಾಜಕಾರಣವನ್ನು ಸಾಕಷ್ಟು ಟೀಕೆ ಮಾಡಬಹುದು. ಆದರೆ, ಪ್ರಾಮಾಣಿಕವಾಗಿ ರಾಜಕಾರಣ ಮಾಡಿ ಜನರಿಗೆ ಸೇವೆ ಸಲ್ಲಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನಮಗೆ ಕಾಣಿಸಿದ್ದು ಆಮ್ ಆದ್ಮಿ ಪಕ್ಷ. ಪ್ರಾಮಾಣಿಕತೆ, ಪಾರದರ್ಶಕತೆ, ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವ ಸಾಧ್ಯತೆಗಳು ಇವೆ. ಅದನ್ನು ಅರವಿಂದ್ ಕೇಜ್ರಿವಾಲ್ ಅವರು ತೋರಿಸಿಕೊಟ್ಟಿದ್ದಾರೆ.

ಈ ನಿಟ್ಟಿನಲ್ಲಿ ನಾವೆಲ್ಲ ಹೆಜ್ಜೆ ಹಾಕಬೇಕಾಗಿದೆ. ಅಂತಹ ಪ್ರಯತ್ನಗಳು ನಡೆಯಬೇಕಾಗಿದೆ. ನಾನು ಅನೇಕ ಸಂಘಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ, ನಿರ್ವಹಿಸುತ್ತಿದ್ದೇನೆ. ಈಗ ಎಲ್ಲದಕ್ಕೂ ರಾಜಕಾರಣವೇ ಪ್ರಮುಖ ಹಿನ್ನೆಲೆ ಮತ್ತು ಪ್ರಾಮಾಣಿಕವಾಗಿರಬೇಕೆಂಬ ನೆಲೆಗಟ್ಟಿನಲ್ಲಿ ಆಮ್ ಆದ್ಮಿ ಪಕ್ಷ ಸೇರಿದ್ದೇನೆ ಎಂದು ಅವರು ತಿಳಿಸಿದರು. ಸೇರ್ಪಡೆ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಮೋಹನ್ ದಾಸರಿ, ಜಗದೀಶ್ ವಿ.ಸದನ್ ಮುಂತಾದವರು ಇದ್ದರು.