ಆರ್‌ಬಿಐನಿಂದ 10 ಸಾವಿರ ಕೋಟಿ ಬಾಂಡ್ ಬಿಡುಗಡೆ

ನವದೆಹಲಿ, ಜ.1- ತೀವ್ರಗೊಂಡಿರುವ ಆರ್ಥಿಕ ಮುಗ್ಗಟ್ಟಿನಿಂದ ಉಂಟಾಗಿರುವ ಸಂಕಷ್ಟದಿಂದ ಆರ್‌ಬಿಐ ಸುಮಾರು 10 ಸಾವಿರ ಕೋಟಿ ರೂಪಾಯಿ ಸರ್ಕಾರಿ ಭದ್ರತೆಯ ಬಾಂಡ್ ಗಳನ್ನು ಏಕಕಾಲಾವಧಿಗೆ ಸೀಮಿತಗೊಂಡಂತೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿದೆ.  ಪ್ರಸ್ತುತ ಲಭ್ಯ ಇರುವ ನಗದು ಮತ್ತು ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದ ಬಳಿಕ ಸರ್ಕಾರಿ ಬಾಂಡ್‍ಗಳನ್ನು ಮಾರಾಟ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾಗಿ ಆರ್‍ಬಿಐ ತಿಳಿಸಿದೆ.

ಆಸಕ್ತರು ಆರ್‍ಬಿಐನ ಕೋರ್ ಬ್ಯಾಂಕಿಂಗ್ ಸಲ್ಯೂಷನ್ (ಇ-ಕುಬೇರ್)ನಲ್ಲಿ ಜನವರಿ 7ರಂದು ಬೆಳಗ್ಗೆ 10ರಿಂದ 11 ಗಂಟೆಯ ನಡುವೆ ಎಲೆಕ್ಟ್ರಾನಿಕ್ ಬಿಡ್ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಫಲಿತಾಂಶವನ್ನು ಅದೇ ದಿನ ಪ್ರಕಟಿಸಲಾಗುತ್ತದೆ. ಯಶಸ್ವಿ ಬಿಡ್‍ದಾರರು ತಾವು ಖರೀದಿಸಿದ ಬಾಂಡ್‍ಗೆ ಸಮನಾದ ಮೊತ್ತವನ್ನು ತಮ್ಮ ಚಾಲ್ತಿ ಖಾತೆಯ ಅಥವಾ ಸಬ್ಸಿಡರಿ ಜನರಲ್ ಲೆಡ್ಜರ್‍ನಲ್ಲಿ ಕಾಯ್ದಿರಿಸಿರಬೇಕು ಎಂದು ಸೂಚಿಸಲಾಗಿದೆ.

ಕೋವಿಡ್‍ನ ಕಾರಣದಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಅದನ್ನು ಸರಾಗಗೊಳಿಸಲು ಕೇಂದ್ರ ಬ್ಯಾಂಕ್ ಸತತ ಪ್ರಯತ್ನ ನಡೆಸಿದೆ. ಆರ್‍ಬಿಐ ನಿರಂತರವಾಗಿ ಆರ್ಥಿಕ ಪರಿಸ್ಥಿತಿಯನ್ನು ವಿಶ್ಲೇಷಣೆ ನಡೆಸುತ್ತಿದ್ದು, ಅದರಂತೆ ದೇಶದ ಮಾರುಕಟ್ಟೆ ವ್ಯವಸ್ಥೆ ಮತ್ತು ಆರ್ಥಿಕ ಪರಿಸ್ಥಿತಿ ಗಂಭೀರವಾಗಿವೆ ಎಂದು ಹೇಳಲಾಗಿದೆ.