ರೆಪೋ ದರ ಹೆಚ್ಚಳ, ಜೀವನ ಮತ್ತಷ್ಟು ದುಬಾರಿ

Social Share

ನವದೆಹಲಿ,ಆ.5- ಹಣದುಬ್ಬರ ಸಹನೆಯ ಮಿತಿ ದಾಟಿ ಏರಿಕೆಯಾಗಿರುವ ನಡುವೆಯೇ ಆರ್‌ಬಿಐ ಬ್ಯಾಂಕುಗಳ ಬಡ್ಡಿ ದರ ರೇಪೋವನ್ನು 50 ಅಂಶಗಳ ಆಧಾರದಲ್ಲಿ ಹೆಚ್ಚಳ ಮಾಡಿದ್ದು, ಶೇ.5.4ಕ್ಕೆ ಏರಿಕೆ ಮಾಡಿದೆ. ಕಳೆದ ಆ.3ರಿಂದ 5ರವರೆಗೆ ನಡೆದ ಆರ್‍ಬಿಐನ ವಿತ್ತಿ ನೀತಿ ಸಮಿತಿಯ ಸಭೆ ಬಳಿಕ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‍ಬಿಐನ ಗೌರ್ನ್‍ರ್ ಶಕ್ತಿಕಾಂತ್ ದಾಸ್ ಅವರು ರೇಪೋ ದರ ಹೆಚ್ಚಳದ ಬಗ್ಗೆ 6 ಮಂದಿ ಸದಸ್ಯರ ಸಮಿತಿ ಸರ್ವಾನುಮತದ ಬೆಂಬಲ ನೀಡಿದೆ ಎಂದು ಹೇಳಿದ್ದಾರೆ.

ರೇಪೋ ದರ ಹೆಚ್ಚಳದಿಂದ ಇನ್ನು ಮುಂದೆ ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿ ದರ ಮತ್ತು ಕಂತುಗಳು ಹೆಚ್ಚಾಗಲಿವೆ. ಹಣಕಾಸು ವಹಿವಾಟುಗಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಮನೆ, ವಾಹನ, ಸಾಲಗಳು ದುಬಾರಿಯಾಗಲಿವೆ.
ಈಗಾಗಲೇ ಹಣದುಬ್ಬರದಿಂದ ಸಂಕಷ್ಟಕೀಡಾಗಿರುವ ಜನ ಸಾಮಾನ್ಯರ ಮೇಲೆ ಆರ್ಥಿಕ ಚಟುವಟಿಕೆಗಳ ಬರೆ ಮತ್ತಷ್ಟು ಘಾಸಿ ಮಾಡಲಿದೆ. ಆದರೆ, ಜಾಗತಿಕ ವಿದ್ಯಮಾನಗಳು, ತೈಲ ಬೆಲೆ ಏರಿಕೆಯಿಂದಾಗಿ ರೇಪೋ ಪರಿಷ್ಕರಣೆ ಸುಧಾರಣಾ ಕ್ರಮಗಳಲ್ಲಿ ಒಂದು ಎಂದು ಆರ್‍ಬಿಐ ಗೌರ್ನರ್ ಸಮರ್ಥಿಸಿಕೊಂಡಿದ್ದಾರೆ.

ಕೋವಿಡ್‍ಗೂ ಮುನ್ನ 2019ರ ಆಗಸ್ಟ್ ವೇಳೆಯಲ್ಲಿದ್ದ ಪ್ರಮಾಣಕ್ಕೆ ಸರಿಯಾಗಿ ರೇಪೋವನ್ನು ಪರಿಷ್ಕರಣೆ ಮಾಡಲಾಗಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ. ಸ್ಥಾಯಿ ಠೇವಣಿ ಸೌಲಭ್ಯವನ್ನು ಶೇ.5.15ಕ್ಕೆ ಹೊಂದಿಸಲಾಗಿದ್ದು, ಮಾರ್ಜಿನಲ್ ಸ್ಟಾಡಿಂಗ್ ಸ್ಪೆಷಲಿಟಿಯನ್ನು ಶೇ.5.65ಕ್ಕೆ ನಿಗದಿ ಮಾಡಲಾಗಿದೆ. ಇದರಿಂದಾಗಿ ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಆರ್‍ಬಿಐ ವ್ಯಕ್ತಪಡಿಸಿದೆ.

ಈ ಮೊದಲು 20 ಅಂಶಗಳ ಆಧಾರದ ಮೇಲೆ ರೇಪೋವನ್ನು ಪರಿಷ್ಕರಿಸಲಾಗಿತ್ತು. ಮೇನಲ್ಲಿ 40, ಜೂನ್‍ನಲ್ಲಿ 50 ಅಂಶಗಳ ಆಧಾರದ ಮೇಲೆ ರೇಪೋ ಪರಿಷ್ಕರಣೆಯಾಗಿದೆ. ಮುಂದಿನ ಸಭೆಯನ್ನು ಅಕ್ಟೋಬರ್‍ಗೆ ನಿಗದಿ ಪಡಿಸಲಾಗಿದ್ದು, ಆಗ ಮತ್ತೊಮ್ಮೆ ರೇಪೋ ಹೆಚ್ಚಳವಾಗುವ ಆತಂಕಗಳು ಕೇಳಿ ಬಂದಿವೆ.

ಸತತವಾಗಿ ಕಳೆದ 6 ತಿಂಗಳಿನಿಂದಲೂ ಹಣದುಬ್ಬರ ಏರಿಕೆ ಕ್ರಮಾಂಕದಲ್ಲೇ ಇದೆ. ಸಹನೆಯ ಮಿತಿಯಾಗಿರುವ ಶೇ.6ರನ್ನು ದಾಟಿ ಶೇ.6.7ರಷ್ಟು ಹಣದುಬ್ಬರವಿದದು, ಗ್ರಾಹಕರ ಬೆಲೆ ಸೂಚ್ಯಂಕ ಗಂಭೀರ ಸ್ಥಿತಿಯಲ್ಲಿದೆ. ಆದರೂ ದೇಶೀಯ ಆರ್ಥಿಕತೆ ಸ್ಥಿರ ಮಟ್ಟದಲ್ಲಿದ್ದು, ಜಾಗತಿಕವಾಗಿ ಆರ್ಥಿಕತೆ ಸುಧಾರಣೆಯ ಹಾದಿಯಲ್ಲಿದೆ ಎಂದು ಶಕ್ತಿಕಾಂತ್‍ದಾಸ್ ಹೇಳಿದರು.

ಪೂರ್ವ ಯೂರೋಪ್ ದೇಶಗಳ ಯುದ್ಧಗಳು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ. ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಪ್ಯಾರಲ್‍ಗೆ 105ಡಾಲರ್‍ಗೆ ಏರಿಕೆಯಿಂದಾಗಿ ಹಣದುಬ್ಬರ ಸಹನಾ ಮಿತಿಯನ್ನು ದಾಟಿದೆ. ಎರಡನೇ ತ್ರೈಮಾಸಿಕದಲ್ಲಿ ಇದು ಶೇ.7.1ರಷ್ಟು ಆಗಬಹುದು. ಮೂರನೇ ತ್ರೈಮಾಸಿಕದಲ್ಲಿ ಶೇ.6.4, ನಾಲ್ಕನೆ ತ್ರೈಮಾಸಿಕದಲ್ಲಿ ಶೇ.5.8ರಷ್ಟಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ದೇಶದ ಜಿಡಿಪಿ ಬೆಳವಣಿಗೆಯನ್ನು ಶೇ.7.2ಎಂದು ಅಂದಾಜಿಸಿರುವ ಆರ್‍ಬಿಐ ಮುಂದಿನ ವರ್ಷ ನೈಜ್ಯ ಬೆಳವಣಿಗೆ ದರವನ್ನು ಶೇ.6.7 ಎಂದು ನಿರೀಕ್ಷಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಮಳೆಯಿಂದಾಗಿ ಒಂದಿಷ್ಟು ಬೆಳೆ ಹಾನಿಗಳು ಸಂಭವಿಸಿವೆ. ಜತೆಗೆ ಬಿತ್ತನೆ ಚಟುವಟಿಕೆಗಳು ಉತ್ತಮವಾಗಿದ್ದು, ಕೃಷಿ ಬೆಳೆಯ ನಿರೀಕ್ಷೆಗಳು ಹೆಚ್ಚಾಗಿವೆ. ನಗರ ಪ್ರದೇಶಗಳಲ್ಲಿ ವಾಹನಗಳ ಮಾರಾಟ, ವಿಮಾನಯಾನ, ಟೋಲ್‍ಗಳ ಸಂಗ್ರಹ ಸ್ಥಿರತೆ ಕಂಡುಕೊಂಡಿದೆ. ಸರಕು ಸಾಗಾಣಿಕೆ ಹಾಗೂ ಇತರ ವಲಯಗಳು ಚೇತರಿಕೆ ಕಂಡಿವೆ.

ಸ್ಥಾಯಿ ಠೇವಣಿ ಸೌಲಭ್ಯ ಹೊಂದಾಣಿಕೆಯಿಂದ ಮೇ, ಏಪ್ರಿಲ್ ಅವಧಿಯಲ್ಲಿ 6.7 ಲಕ್ಷ ಕೋಟಿ, ಜೂನ್-ಜುಲೈ ಅವಧಿಯಲ್ಲಿ 3.8 ಲಕ್ಷ ಕೋಟಿ ನಗದು ಬ್ಯಾಂಕಿಗೆ ಹರಿದು ಬಂದಿದೆ. ಈ ನಡುವೆ ಸಮಾಧಾನಕರ ವಿಷಯ ಎಂದರೆ ಭಾರತಕ್ಕೆ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಿದೆ. 2021-22ರಲ್ಲಿ 11.6 ಲಕ್ಷ ಶತಕೋಟಿ ನಗದು, 2022-23 ಸಾಲಿಗೆ 13.6 ಲಕ್ಷ ಶತಕೋಟಿ ಏರಿಕೆಯಾಗಿದೆ.

ಆರ್‍ಬಿಐ ಆರ್ಥಿಕತೆ ಚೇತರಿಕೆಗೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ವಿದೇಶಗಳಲ್ಲಿರುವವರು ಭಾರತ್ ಪೇ ವ್ಯಸ್ಥೆಯನ್ನು ಬಳಸಿಕೊಂಡು ತಮ್ಮ ಸಂಬಂಧಿಕರಿಗೆ ಶಿಕ್ಷಣ ಹಾಗೂ ಇತರ ಅಗತ್ಯಗಳಿಗೆ ಹಣಕಾಸು ನೆರವು ನೀಡಲು ಅವಕಾಶ ಕಲ್ಪಿಸಲಾಗಿದೆ.

Articles You Might Like

Share This Article