RBIನಿಂದ 50,000 ಕೋಟಿ ಸಾಲ ಪಡೆಯಲು ಮುಂದಾದ ರಾಜ್ಯ ಸರ್ಕಾರ

Social Share

ಬೆಂಗಳೂರು,ಜ.15- ಕೋವಿಡ್ ಅಬ್ಬರ ಹಾಗೂ ಲಾಕ್‍ಡೌನ್‍ನಿಂದ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ರಾಜ್ಯ ಸರ್ಕಾರ, ಈ ಹಣಕಾಸು ವರ್ಷದಲ್ಲಿ ಬಹುವಾಗಿ ನೆಚ್ಚಿಕೊಂಡಿರುವುದು ಸಾಲವನ್ನೇ. ಬಜೆಟ್ ಅನುಷ್ಠಾನ ಹಾಗೂ ಸರ್ಕಾರಿ ನೌಕರರ ವೇತನ, ಪಿಂಚಣಿ ಪಾವತಿಗಾಗಿ ಸರ್ಕಾರ ಸಾಲದ ಮೊರೆ ಹೋಗಿದೆ.
ಆ ನಿಟ್ಟಿನಲ್ಲಿ ಜನವರಿಯಿಂದ ಡಿಸೆಂಬರ್‍ವರೆಗೆ ಆರ್‌ಬಿಐ ಮೂಲಕ ಬರೋಬ್ಬರಿ 50,000 ಕೋಟಿ ರೂ. ಸಾಲ ಎತ್ತುವಳಿ ಮಾಡಲು ಮುಂದಾಗಿದೆ. ಕೋವಿಡ್ ಲಾಕ್‍ಡೌನ್‍ನಿಂದ ರಾಜ್ಯದ ಬೊಕ್ಕಸ ಸಂಪೂರ್ಣ ಸೊರಗಿ ಹೋಗಿದೆ. ಇತ್ತ ನಿರೀಕ್ಷಿತ ಗುರಿಯಂತೆ ತೆರಿಗೆ ಮೂಲಗಳಿಂದ ಆದಾಯ ಸಂಗ್ರಹ ಆಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಈ ಹಣಕಾಸು ವರ್ಷದಲ್ಲಿಯೂ ಸಾಲದ ಮೊರೆ ಹೋಗಿದೆ.
2021-22ಸಾಲಿನ ಬಜೆಟ್ ಅನುಷ್ಠಾನ, ಯೋಜನೆ ಜಾರಿ ಮತ್ತು ಸರ್ಕಾರಿ ನೌಕರರ ವೇತನ, ಪಿಂಚಣಿ ಸೇರಿದಂತೆ ಬದ್ಧ ವೆಚ್ಚಕ್ಕಾಗಿ ಸಾಲದ ಮೂಲಕವೇ ಹಣಕಾಸು ಹೊಂದಿಸುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಆರ್ಥಿಕ ವರ್ಷದಲ್ಲಿ 71,332 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ.
ಒಂದು ಅಂದಾಜಿನ ಪ್ರಕಾರ, ಈ ಆರ್ಥಿಕ ವರ್ಷದಲ್ಲೂ ಸುಮಾರು 20,000 ಕೋಟಿ ರೂ. ಆದಾಯ ಕೊರತೆ ಎದುರಾಗಲಿದೆ.ಮೊದಲ ಎರಡು ತ್ರೈಮಾಸಿಕಗಳಲ್ಲಿ ಸರ್ಕಾರ ಆರ್‌ಬಿಐ ಮೂಲಕ ಯಾವುದೇ ಸಾಲ ಎತ್ತುವಳಿ ಮಾಡಿರಲಿಲ್ಲ. ಮೂರನೇ ತ್ರೈಮಾಸಿಕದಿಂದ ನಿರಂತರವಾಗಿ ರಾಜ್ಯ ಸರ್ಕಾರ ಆರ್‌ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡುತ್ತಿದೆ.
# ಕೊನೆ ತ್ರೈಮಾಸಿಕದಲ್ಲಿ 50,000 ಕೋಟಿ ಸಾಲ:
ಹಣಕಾಸು ವರ್ಷದ ಕೊನೆ ತ್ರೈಮಾಸಿಕವಾದ ಜನವರಿ-ಡಿಸೆಂಬರ್‍ವರೆಗೆ ರಾಜ್ಯ ಸರ್ಕಾರ ಆರ್‌ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಲು ಮುಂದಾಗಿದೆ.  ರಾಜ್ಯ ಸರ್ಕಾರ ಮುಂದಿನ ಮೂರು ತಿಂಗಳು ಬರೋಬ್ಬರಿ 50,000 ಕೋಟಿ ರೂ. ಸಾಲ ಮಾಡುವುದಾಗಿ ಆರ್‍ಬಿಐಗೆ ಮಾಹಿತಿ ನೀಡಿದೆ.ಜನವರಿ ತಿಂಗಳಲ್ಲಿ ನಾಲ್ಕು ಬಾರಿ ತಲಾ 5,000 ಕೋಟಿ ರೂ. ನಂತೆ 20,000 ಕೋಟಿ ರೂ. ಸಾಲ ಮಾಡಲಿದೆ.
ಅದೇ ರೀತಿ ಫೆಬ್ರವರಿ ತಿಂಗಳಲ್ಲೂ ಪ್ರತಿ ವಾರ ನಡೆಯಲಿರುವ ಆರ್‍ಬಿಐ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು 20,000 ಕೋಟಿ ಸಾಲ ಎತ್ತುವಳಿ ಮಾಡಲು ಉದ್ದೇಶಿಸಿದೆ. ಇನ್ನು ಹಣಕಾಸು ವರ್ಷದ ಕೊನೆ ತಿಂಗಳಾದ ಮಾರ್ಚ್‍ನ ನಾಲ್ಕು ವಾರದಲ್ಲಿ ಒಟ್ಟು 10,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಿದೆ. ಅದರ ಭಾಗವಾಗಿ ಜನವರಿ 4 ಮತ್ತು 11ರಂದು ತಲಾ 5,000ದಂತೆ ಈವರೆಗೆ 10,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಇನ್ನುಳಿದ ಎರಡು ವಾರದಲ್ಲಿ ಮತ್ತೆ 10,000 ಕೋಟಿ ರೂ.ಸಾಲ ಎತ್ತುವಳಿ ಮಾಡಲು ಸಿದ್ಧವಾಗಿದೆ.
# ಈವರೆಗೆ 22,000 ಕೋಟಿ ಸಾಲ ಎತ್ತುವಳಿ:
ಮೂರನೇ ತ್ರೈಮಾಸಿಕದಲ್ಲಿ ರಾಜ್ಯ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲ ಮಾಡಲು ಪ್ರಾರಂಭಿಸಿತ್ತು. ಅಕ್ಟೋಬರ್- ಡಿಸೆಂಬರ್‍ವರೆಗಿನ ಮೂರನೇ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್‍ಬಿಐ ಮೂಲಕ ಈವರೆಗೆ 16,000 ಕೋಟಿ ರೂ. ರಾಜ್ಯ ಅಭಿವೃದ್ಧಿ ಸಾಲ (ಎಸ್ ಡಿಎಲï) ಎತ್ತುವಳಿ ಮಾಡಿದೆ.
ಕರ್ನಾಟಕ ಸರ್ಕಾರ ಅಕ್ಟೋಬರ್‍ನಲ್ಲಿ ಮೂರು ಬಾರಿ ತಲಾ 2,000 ಕೋಟಿಯಂತೆ ಒಟ್ಟು 6,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಅದರಂತೆ ಅ.5ರಂದು ಆರ್ಬಿಐ ನಡೆಸಿದ ಹರಾಜಿನಲ್ಲಿ ಮುಕ್ತ ಮಾರುಕಟ್ಟೆಯಿಂದ 2,000 ಕೋಟಿ ರೂ.ಸಾಲ ಮಾಡಿದ್ದರೆ, ಅ.12ರಂದು 2,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಅಕ್ಟೋಬರ್ 18ರಂದು ಮತ್ತೆ 2,000 ಕೋಟಿ ಸಾಲ ಮಾಡಿದೆ.
ಇನ್ನು ನವೆಂಬರ್ ತಿಂಗಳಲ್ಲೂ ಮೂರು ಬಾರಿ ತಲಾ 2,000 ಕೋಟಿಯಂತೆ 6,000 ಕೋಟಿ ರೂ. ಸಾಲ ಮಾಡಿದೆ. ನವೆಂಬರ್ 16 ರಂದು 2,000 ಕೋಟಿ, ನವೆಂಬರ್ 23ರಂದು 2,000 ಕೋಟಿ ಹಾಗೂ ನವೆಂರ್ಬ 23ರಂದು 2,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ.
ಇತ್ತ ಡಿಸೆಂಬರ್ ತಿಂಗಳಲ್ಲಿ ಮೂರು ಬಾರಿ ತಲಾ 2,000 ಕೋಟಿ, ಒಂದು ಬಾರಿ 4,000 ಕೋಟಿ ರೂ.ನಂತೆ ಒಟ್ಟು 10,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಅದರಂತೆ ಡಿಸೆಂಬರ್ 7ರಂದು 2,000 ಕೋಟಿ ರೂ., ಡಿ.14ರಂದು 2,000 ಕೋಟಿ, ಡಿ.21ರಂದು 2,000ಕೋಟಿ ಹಾಗೂ ಡಿ.28ರಂದು 4,000 ಕೋಟಿ ಸಾಲ ಮಾಡಿದೆ.
ಇದೇ ಜನವರಿ 4 ರಂದು 5,000 ಕೋಟಿ ರೂ. ಹಾಗೂ ಜನವರಿ 11ರಂದು 5,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಆ ಮೂಲಕ ಈವರೆಗೆ ಆರ್‍ಬಿಐ ಮೂಲಕ ರಾಜ್ಯ ಸರ್ಕಾರ 22,000 ಕೋಟಿ ರೂ. ಸಾಲ ಮಾಡಿದೆ.

Articles You Might Like

Share This Article