ಬೆಂಗಳೂರು, ಸೆ.19- ಮೊಬೈಲ್‍ಗೆ ಕರೆ ಮಾಡಿ ಮಹಿಳೆಗೆ ಕಿರುಕುಳ ನೀಡುತ್ತಿದ್ದ ರಿಯಲ್ ಎಸ್ಟೇಟ್ ಏಜೆಂಟ್‍ನನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ನಾಗರಾಜ ಬಂಧಿತ ಆರೋಪಿ. ಈತ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾನೆ.
ಒಂದೂವರೆ ವರ್ಷದ ಹಿಂದೆ ಮಹಿಳೆಯೊಬ್ಬರ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಒಬ್ಬರಿಗೊಬ್ಬರು ಮೊಬೈಲ್ ನಂಬರ್‍ಅನ್ನು ಪರಸ್ಪರ ವಿನಿಮಯ ಮಾಡಿಕೊಂಡು ಆಗಾಗ್ಗೆ ಮಾತನಾಡುತ್ತಿದ್ದರು.
ಇತ್ತೀಚೆಗೆ ನಾಗರಾಜ ಮಹಿಳೆಯ ಮೊಬೈಲ್‍ಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದನು. ಕೆಲ ದಿನಗಳ ಹಿಂದೆ ವಸಂತನಗರದ ಮೌಂಟ್ ಕಾರ್ಮಲ್ ಕಾಲೇಜು ಬಳಿ ಬರಲು ಮಹಿಳೆಗೆ ತಿಳಿಸಿದ್ದಾನೆ. ಆ ಮಹಿಳೆ ಅಲ್ಲಿಗೆ ಬಂದಾಗ ಆಕೆಯ ಕೈ ಹಿಡಿದು ಎಳೆದಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಆತನ ವರ್ತನೆಯಿಂದ ಬೇಸತ್ತ ಮಹಿಳೆ ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ನಾಗರಾಜ್‍ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.