ಆನೇಕಲ್, ಜ.6- ಕಾರಿನೊಳಗೆ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಅನೇಕಲ್ ಠಾಣೆ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಈಗಾಗಲೇ 2 ತಂಡಗಳನ್ನು ರಚಿಸಲಾಗಿದ್ದು , ಈ ತಂಡಗಳು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕುತ್ತಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‍ಪಿ ಡಾ.ವಂಶಿಕೃಷ್ಣ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೊಲೆಯಾಗಿರುವ ರಾಜಶೇಖರ ರೆಡ್ಡಿ ಅವರು ಮೂಲತಃ ಚಿತ್ತೂರಿನವರು. ಆರೇಳು ವರ್ಷಗಳಿಂದ ಬೆಂಗಳೂರಿನ ಬಿಟಿಎಂ ಲೇಔಟ್‍ನಲ್ಲಿ ವಾಸವಾಗಿದ್ದರು ಎಂಬುದು ಸದ್ಯದ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಹೇಳಿದರು.
ರಾಜಶೇಖರ ರೆಡ್ಡಿ ಅವರು ಕಾರಿನಲ್ಲಿ ರಾತ್ರಿ 7.30ರ ಸುಮಾರಿನಲ್ಲಿ ವೆಂಕಟೇಶ್ವರ ಚಿತ್ರಮಂದಿರದ ಬಳಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಬೈಕ್‍ಗಳಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ಕಾರಿನೊಳಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಆನೇಕಲ್ ಪಟ್ಟಣದ ಸುತ್ತಮುತ್ತ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಎಫ್‍ಎಸ್‍ಎಲ್ ಅಕಾರಿಗಳು ಆಗಮಿಸಿ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದು , ಸದ್ಯದಲ್ಲೇ ಅದರ ವರದಿ ನಮ್ಮ ಕೈಸೇರಲಿದೆ ಎಂದರು. ರಾಜಶೇಖರ ರೆಡ್ಡಿ ಅವರ ಕಾರನ್ನುಹಿಂಬಾಲಿಸಿಕೊಂಡು ಬಂದಿರುವ ದುಷ್ಕರ್ಮಿಗಳ ವಾಹನಗಳ ಸಂಖ್ಯೆಯನ್ನು ರಸ್ತೆಯಲ್ಲಿನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಲೆ ಹಾಕಲಾಗುತ್ತಿದೆ.
ಕಾರಿನಲ್ಲಿದ್ದಂತಹ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ. ಆರೋಪಿಗಳು ಆನೇಕಲ್ ಪಟ್ಟದವರೇ ಅಥವಾ ಹೊರಗಿನವರೇ ಎಂಬುದನ್ನು ಪತ್ತೆ ಹಚ್ಚಲು ಡಿವೈಎಸ್‍ಪಿ ಮಲ್ಲೇಶ್ ಅವರ ನೇತೃತ್ವದಲ್ಲಿ ತನಿಖಾ ತನಿಖಾ ತಂಡಗಳನ್ನು ರಚಿಸಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂದಿಸಲಿದ್ದೇವೆ ಎಂದು ಎಸ್‍ಪಿ ಕೋನವಂಶಿ ಕೃಷ್ಣ ಅವರು ವಿಶ್ವಾಸ ವ್ಯಕ್ತಪಡಿಸಿ ದ್ದಾರೆ. ಹಣಕಾಸು ವಿಚಾರದಲ್ಲಿ ರಾಜಶೇಖರ ರೆಡ್ಡಿ ಅವರ ಕೊಲೆಯಾಗಿರಬಹುದೆಂದು ಶಂಕೆ ವ್ಯಕ್ತಪಡಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
