ಕಲಿಯುಗ ಕರ್ಣ ಅಂಬಿ 71ನೇ ಜನ್ಮದಿನ, ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ, ಅಭಿ

ಬೆಂಗಳೂರು, ಮೇ 29- ಕನ್ನಡ ಚಿತ್ರರಂಗ ಮರೆಯಲಾಗದ ಕಲಿಯುಗ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮ ದಿನೋತ್ಸವ. ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ತಮ್ಮ ನೆಚ್ಚಿನ ನಟನ 71ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಹಾಗೂ ಕುಟುಂಬ ವರ್ಗದವರು ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಸಾವಿರಾರು ಅಭಿಮಾನಿಗಳು ಸಮಾ ಸ್ಥಳಕ್ಕೆ ಭೇಟಿಕೊಟ್ಟು ನಮಿಸಿದ್ದಾರೆ.

ಅಂಬರೀಶ್ ಅಭಿಮಾನಿಗಳ ಬಳಗ, ಕನ್ನಡ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ಬೆಂಗಳೂರಿನ ಅನೇಕ ಕಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಮಂಡ್ಯ ಜಿಲ್ಲಾಯ ಎಲ್ಲ ತಾಲೂಕಿನ ಹಳ್ಳಿಗಳಲ್ಲಿ ಊರಮಗನ ಹುಟ್ಟುಹಬ್ಬವನ್ನು ಅಭಿಮಾನದಿಂದ ಆಚರಿಸಲಾಗಿದೆ. ಮದ್ದೂರು ತಾಲೂಕು ಅಂಬರೀಶ್ ಅಭಿಮಾನಿಗಳ ಒಕ್ಕೂಟ ಪ್ರಧಾನ ಕಚೇರಿ ಕೂಡ ಉದ್ಘಾಟನೆಯಾಗಿದೆ.

ಸಿನಿಮಾ ರಾಜಕೀಯ ದಲ್ಲಿ ಎಷ್ಟು ಹೆಸರನ್ನು ಗಳಿಸಿದ್ದರೋ ಅದಕ್ಕಿಂತಲೂ ಮಿಗಿಲಾಗಿ ಕನ್ನಡಿಗರ ಹೃದಯಗಳಲ್ಲಿ ದಾನವೀರ ಶೂರಕರ್ಣ, ಸಹೃದಯಿ ಕನ್ನಡ ಚಿತ್ರರಂಗದ ಆಪದ್ಬಾಂಧವ, ಕನ್ನಡ ನೆಲ ಜಲ ಕುರಿತಾಗಿ ಸದಾ ಮಿಡಿಯುತ್ತಿದ್ದ ಅವರ ಕನ್ನಡ ಅಭಿಮಾನ, ನಿಷ್ಕಲ್ಮಶ ನೇರ ನುಡಿ ನೆನಪುಗಳು ಸದಾ ಉಳಿದುಹೋಗಿವೆ.

ಸಂಬಂಧಿಯಾಗಲಿ, ಸ್ನೇಹಿತರಾಗಲಿ ತಪ್ಪು ಮಾಡಿದರೆ ನೇರವಾಗಿ ಹೇಳುವಂತಹ ವ್ಯಕ್ತಿತ್ವ. ಚಿತ್ರರಂಗದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಆದಾಗ ಮೊದಲು ಬಾಗಿಲು ತಟ್ಟುತಿದ್ದಿದ್ದು ಅಂಬಿ ಮನೆಯನ್ನ.

ಅವರು ಬೈದರು ಚಂದ ಹೊಗಳಿದರೂ ಚಂದ.ಕೊನೆಯವರೆಗೂ ಚಂದನವನಕ್ಕೆ ಹಿರಿಯಣ್ಣನಂತೆ ಇದ್ದು ಹುಲಿಯಂತೆ ಬದುಕಿದ ರೆಬೆಲ್ ಸ್ಟಾರ್ ಯಾರಿಗೂ ಇಲ್ಲದ ಸ್ನೇಹ ಬಳಗವನ್ನು ಹೊಂದಿದ್ದ ಸ್ನೇಹಜೀವಿ. ಇಂತಹ ವ್ಯಕ್ತಿತ್ವವುಳ್ಳ ಮಂಡ್ಯ ಗಂಡು ಮತ್ತೆ ಹುಟ್ಟಿ ಬರಲಿ ಎಂದು ಎಲ್ಲ ಕನ್ನಡಿಗರ ಆಶಯವಾಗಿದೆ.