ಬೆಂಗಳೂರು,ಆ.16- ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಮಾದರಿಯಲ್ಲಿ ಸರ್ಕಾರಿ ಹುದ್ದೆಗಳ ಎಲ್ಲ ನೇಮಕಾತಿಗಳಲ್ಲೂ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ನೀಡುವ ನಿರ್ಣಯವನ್ನು ಶೀಘ್ರವೇ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಣೆ ಮಾಡಿದರು.
ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ಯುವಜನ ಕ್ರೀಡಾ ಇಲಾಖೆ ವತಿಯಿಂದ ನಡೆದ ಕಾಮನವೆಲ್ತ್- 2022 ಕ್ರೀಡಾಕೂಟದಲ್ಲಿ ಭಾಗವಹಿಸಿದ ಮತ್ತು ಪದಕ ವಿಜೇತ ಕರ್ನಾಟಕದ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭ ಹಾಗೂ ಅಮೃತ ಕ್ರೀಡಾ ದತ್ತು ಯೋಜನೆಯ ಕ್ರೀಡಾಪಟುಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಶೇ.2ರಷ್ಟು ಮೀಸಲಾತಿಯನ್ನು ಇತರೆ ಸರ್ಕಾರಿ ಉದ್ಯೋಗ ಪಡೆಯಲು ನೀಡುತ್ತೇವೆ. ಇದೇ ರೀತಿ ಕ್ರೀಡಾಪಟುಗಳಿಗೂ ಶೇ.2ರಷ್ಟು ಮೀಸಲಾತಿ ಕಲ್ಪಿಸುವ ಕಡತ ನನ್ನ ಬಳಿ ಇದೆ. ಆದಷ್ಟು ಬೇಗ ಇದನ್ನು ವಿಲೇವಾರಿ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಕೇವಲ ಸರ್ಕಾರಿ ಹುದ್ದೆ ಪಡೆಯಲು ಕ್ರೀಡಾಪಟುಗಳಾಗಬೇಡಿ. ಪ್ರಧಾನಿ ನರೇಂದ್ರಮೋದಿ ಅವರ ಆಶಯದಂತೆ ಖೇಲೋ ಇಂಡಿಯ ಜೊತೆಗೆ ಜೀತ್ ಇಂಡಿಯ ಆಗಬೇಕು. ನಿಮ್ಮ ನೆರವಿಗೆ ಸರ್ಕಾರ ಸದಾ ಸಿದ್ದವಿದೆ. ದೇಶದ ಮತ್ತು ರಾಜ್ಯ ಹೆಮ್ಮೆಪಡುವ ಕೆಲಸವಾಗಬೇಕೆಂದು ಸಿಎಂ ಆಶಿಸಿದರು.
ಪ್ರಶಸ್ತಿ ಮೊತ್ತವನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಕೇಳಿಬಂದಿದೆ. 5ರಿಂದ 10 ಲಕ್ಷ, 10ರಿಂದ 25 ಲಕ್ಷ, 25ರಿಂದ 50 ಲಕ್ಷ, 50 ಲಕ್ಷದಿಂದ 50 ಕೋಟಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದೀರಿ. ಇದರ ಚಿಂತ ಬೇಡ. ನಿಮ್ಮ ನೆರವಿಗೆ ನಾವು ಸದಾ ಸಿದ್ದ ಎಂದು ಹೇಳಿದರು.
ದೇಶದ ಯಾವುದೇ ರಾಜ್ಯಗಳಲ್ಲೂ ಕ್ರೀಡೆಗಳಿಗೆ ನಮ್ಮ ಸರ್ಕಾರದಷ್ಟು ಪ್ರೋತ್ಸಾಹ ನೀಡಿರುವ ನಿದರ್ಶನಗಳಿಲ್ಲ. ಅಮೃತ ಯೋಜನೆಯಡಿ ಕ್ರೀಡಾಂಗಣ ಮತ್ತು ಕ್ರೀಡಾಪಟುಗಳ ದತ್ತು ಪಡೆಯಲಾಗುತ್ತದೆ ಎಂದು ಹೇಳಿದರು.
ಯಾರಿಗೆ ಭೌತಿಕ ಸಾಮಥ್ರ್ಯ ಹಾಗೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಗುರಿ ಇರುತ್ತದೆಯೋ ಅಂಥವರು ಏನುಬೇಕಾದರೂ ಸಾಧಿಸಿ ತೋರುತ್ತಾರೆ. ನಿಮಗೆ ಮೊದಲು ಶಿಸ್ತನ್ನು ಮೂಡಿಸಿಕೊಳ್ಳಿ. ಅಂತಹ ಗುಣ ಇದ್ದರೆ ಮಾತ್ರ ಯಶಸ್ಸು ಸಿಗುತ್ತದೆ ಎಂದು ಕಿವಿಮಾತು ಹೇಳಿದರು.
ಯುವಜನ ಕ್ರೀಡಾ ಸಚಿವ ನಾರಾಯಣಗೌಡ ಮಾತನಾಡಿ, ನಮ್ಮ ಸರ್ಕಾರದಷ್ಟು ಕ್ರೀಡಾಪಟುಗಳಿಗೆ ಹಿಂದಿನ ಯಾವುದೇ ಸರ್ಕಾರಗಳು ಆರ್ಥಿಕ ನೆರವು ನೀಡಿರಲಿಲ್ಲ. ಅಮೃತ ಯೋಜನೆಯಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲಾಖೆಗೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈಗಾಗಲೇ ನಮ್ಮ ಸರ್ಕಾರ ಯುವ ನೀತಿಯನ್ನು ಅಂಗೀಕರಿಸಿದೆ. ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಇದನ್ನು ಅಂಗೀಕರಿಸಲಾಗುವುದು. ಇದರಿಂದ ಕ್ರೀಡೆಗೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ಹೇಳಿದರು.
ಪದವಿ ಮುಗಿಸಿದ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.2ರಷ್ಟು ಮೀಸಲಾತಿ ನೀಡಬೇಕೆಂದು ಸಿಎಂಗೆ ಮನವಿ ಮಾಡಲಾಗಿದೆ. ಶೀಘ್ರದಲ್ಲೇ ಅವರು ಒಳ್ಳೆಯ ತೀರ್ಮಾನವನ್ನು ತೆಗೆದುಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಅಮೃತ ಯೋಜನೆಯಡಿ ರಾಜ್ಯದ 75 ಕ್ರೀಡಾಂಗಣಗಳನ್ನು ದತ್ತು ಪಡೆದುಕೊಂಡು ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಕೆಲಸವಾಗುತ್ತಿದೆ. ಗ್ರಾಮೀಣ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಹ ನಮ್ಮ ಇಲಾಖೆ ಮಾಡುತ್ತಿದೆ ಎಂದು ತಿಳಿಸಿದರು.
ಇನ್ನೆರಡು ತಿಂಗಳಲ್ಲಿ ರಾಜ್ಯಮಟ್ಟದ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಉತ್ತೇಜನ ನೀಡಲು ಇದೊಂದು ಉತ್ತಮ ವೇದಿಕೆಯಾಗಲಿದೆ. ಕ್ರೀಡಾಪಟುಗಳ ಬೇಡಿಕೆ ಏನೇ ಇದ್ದರೂ ಅದನ್ನು ಸರ್ಕಾರ ಮಾಡಲಿದೆ. ಕ್ರೀಡಾಪಟುಗಳು ಹೆಚ್ಚು ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಹೆಸರು ತನ್ನಿ ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಗುರೂಜ್ ಪೂಜಾರಿ, ರಾಜೇಶ್ವರಿ ಗಾಯಕವಾಡ, ಪ್ರಿಯಾ ಮೋಹನ್, ಅಂಕಿತಾ ಸುರೇಶ್ ಅವರುಗಳನ್ನು ಸನ್ಮಾನಿಸಲಾಯಿತು. ನಂತರ ಕ್ರೀಡಾಪಟುಗ ಜೊತೆ ಸಂವಾದ ನಡೆಸಲಾಯಿತು.
ಕ್ರೀಡಾಪಟುಗಳು ತಾವು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸರ್ಕಾರದ ಆರ್ಥಿಕ ನೆರವಿನ ಬಗ್ಗೆ ಹೆಚ್ಚಿನ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್, ಶಾಸಕ ಸೋಮಶೇಖರ ರೆಡ್ಡಿ, ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.