1120 ದೈಹಿಕ ಶಿಕ್ಷಕರ ನೇಮಕಾತಿಗೆ ಪ್ರಸ್ತಾಪನೆ ಸಲ್ಲಿಸಲಾಗಿದೆ : ಬಿ.ಸಿ.ನಾಗೇಶ್

Social Share

ಬೆಂಗಳೂರು,ಸೆ.19- ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಾಕಿ ಇರುವ 1120 ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಪ್ರೌಢಶಾಲೆಗಳಿಗೆ 200 ದೈಹಿಕ ಶಿಕ್ಷಕರನ್ನು ನೇಮಿಸಲು ಆರ್ಥಿಕ ಇಲಾಖೆ ಅನುಮತಿ ನೀಡಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಉಳಿದಂತೆ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳಲ್ಲಿ ದೈಹಿಕ ಶಿಕ್ಷಣದಡಿ ಹತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು ಚಿತ್ರಕಲೆಯಲ್ಲಿ 2800ಕ್ಕೂ ಹೆಚ್ಚು ಶಿಕ್ಷಕರೂ ಕೆಲಸ ನಿರ್ವಹಿಸುತ್ತಿದ್ದಾರೆ. ಖಾಲಿ ಇರುವ ದೈಹಿಕ ಶಿಕ್ಷಕರ ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಈ ವೇಳೆ ಹಿರಿಯ ಸದಸ್ಯ ಅಯನೂರು ಮಂಜುನಾಥ್ ಅವರು ಮಧ್ಯೆಪ್ರವೇಶಿಸಿ, ತಮ್ಮ ಇಲಾಖೆಯ ಮಾಹಿತಿಗಳನ್ನು ಮಾತ್ರ ನೀಡಬೇಕು. ಬೇರೊಂದು ಇಲಾಖೆಯತ್ತ ಬೆರಳು ಮಾಡಬಾರದು. ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಜೆಡಿಎಸ್‍ನ ಶರವಣ ಅವರು ಸಚಿವರ ಅಸಮರ್ಥತೆ ಎಂದು ಛೇಡಿಸಿದಾಗ, ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. 14 ವರ್ಷಗಳಿಂದ ನೇಮಕಾತಿ ನೆನೆಗುದಿಗೆ ಬಿದ್ದಿರುವುದರಿಂದಾಗಿ ಹುದ್ದೆಗಳು ಖಾಲಿ ಉಳಿದಿವೆ ಎಂದು ಸಚಿವರು ಹೇಳಿದರು.

ನಂತರ ಸದಸ್ಯರಾದ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 2015ರವರೆಗೆ ಖಾಲಿ ಉಳಿದಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಹಣಕಾಸು ಇಲಾಖೆಯ ಅನುಮತಿ ಪಡೆದು ಪ್ರಕ್ರಿಯೆ ಆರಂಭಿಸಲಾಗಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳು 455 ಹುದ್ದೆಗಳಿಗೆ ಪ್ರಸ್ತಾವನೆಯನ್ನೇ ಕಳುಹಿಸಲಿಲ್ಲ. 171 ಹುದ್ದೆಗಳ ಪ್ರಸ್ತಾವನೆಯಲ್ಲಿ ಸರಿಯಾದ ದಾಖಲೆಗಳಿಲ್ಲದೆ ನೆನೆಗುದಿಗೆ ಬಿದ್ದಿವೆ ಎಂದು ಹೇಳಿದರು.

ಸದಸ್ಯ ಸಂಕನೂರ ಮಾತನಾಡಿ, ಸುಮಾರು 11,125 ಹುದ್ದೆಗಳು ಬಾಕಿ ಉಳಿದಿವೆ. ಹೊಸದಾಗಿ ನೀಡಲಾಗಿರುವ ಅಂಕಿ ಅಂಶಗಳ ಪ್ರಕಾರ 9158 ಹುದ್ದೆಗಳಲ್ಲಿ ಭರ್ತಿ ಮಾಡಿಕೊಳ್ಳಬೇಕಿದೆ. ಇಷ್ಟು ಹುದ್ದೆಗಳನ್ನು ಖಾಲಿ ಇಟ್ಟು ಹೇಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಹಣಕಾಸು ಇಲಾಖೆಯಿಂದ ಈಗಾಗಲೇ ಅನುಮತಿ ನೀಡಿರುವ ಹುದ್ದೆಗಳಿಗೆ ಪ್ರಸ್ತಾವನೆಗಳು ಸರಿಯಾಗಿ ಬಂದಿಲ್ಲ. ನೇಮಕಾತಿಗೆ ಅನುಮತಿ ಪಡೆಯಲು ಕಷ್ಟಸಾಧ್ಯವಾಗಿದೆ ಎಂದರು.

ಸದಸ್ಯರಾದ ಬಸವರಾಜ ಹೊರಟ್ಟಿ ಸೇರಿದಂತೆ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನೇಮಕಾತಿ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿಯವರ ಜೊತೆ ವಿಧಾನಪರಿಷತ್ ಸದಸ್ಯರನ್ನೊಳಗೊಂಡ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಸಚಿವರು ಭರವಸೆ ನೀಡಿದರು.

Articles You Might Like

Share This Article