ಬೆಂಗಳೂರು,ಸೆ.19- ನೇಮಕಾತಿ ಅಕ್ರಮಗಳಲ್ಲಿ ಭಾಗವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜಸ್ಥಾನದ ಮಾದರಿಯಲ್ಲಿ ಕಾನೂನು ರೂಪಿಸಬೇಕೆಂದು ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳ ಸಂಘ ಒತ್ತಾಯಿಸಿದೆ.
ನಗರದ ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿದ ಸಂಘದ ಪ್ರಮುಖರು, ಪದಾಧಿಕಾರಿಗಳು, 545 ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ನಡೆಸಿದವರ ವಿರುದ್ಧ ಶೀಘ್ರ ವಿಚಾರಣೆ ಪೂರ್ಣಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು, ಈ ಹುದ್ದೆಗಳು ಮತ್ತು ಹೊಸದಾಗಿ ಅಧಿಸೂಚಿಸಲ್ಪಡುವ 402 ಹುದ್ದೆಗಳಿಗೆ ನೇಮಕಾತಿ ನಡೆಸಲು ಶೀಘ್ರವೇ ಪರೀಕ್ಷಾ ದಿನಾಂಕವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೋವಿಡ್ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಕಾನ್‍ಸ್ಟೆಬಲ್ ಹುದ್ದೆಗಳ ನೇಮಕಾತಿ ನಡೆದಿಲ್ಲ. ಹೀಗಾಗಿ ಪೊಲೀಸ್ ಸಿಬ್ಬಂದಿಗಳ ನೇಮಕಾತಿಯ ವಯೋಮಿತಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆಪಿಟಿಸಿಎಲ್ ಪರೀಕ್ಷೆಯ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಬೇಕು, ಆರೋಪಿಗಳಿಗೆ ರಾಜಸ್ಥಾನದ ಮಾದರಿಯಲ್ಲಿ ಶಿಕ್ಷೆ ಮತ್ತು ದಂಡ ವಿಧಿಸಬೇಕು ಎಂದು ಒತ್ತಾಯಿಸಲಾಗಿದೆ.
ರಾಜ್ಯ ಸರ್ಕಾರದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅವುಗಳಿಗೆ ನೇಮಕಾತಿ ಮಾಡಲು ಸರ್ಕಾರ ವಿಫಲವಾಗಿದೆ. ನೇಮಕಾತಿ ಪ್ರಕ್ರಿಯೆ ನಡೆಸಿರುವ ಕೆಲವು ಹುದ್ದೆಗಳಲ್ಲೂ ಭ್ರಷ್ಟಾಚಾರ ನಡೆದಿದೆ. ಇದರಿಂದ ನೇಮಕಾತಿ ವ್ಯವಸ್ಥೆಯ ಮೇಲೆ ಅಪನಂಬಿಕೆ ಸೃಷ್ಟಿಯಾಗಿದೆ. ಹುದ್ದೆ ಆಕಾಂಕ್ಷಿಗಳಲ್ಲಿ ಭಾರೀ ನಿರಾಸೆ ವ್ಯಕ್ತವಾಗಿದೆ ಎಂದು ಸಂಘಟನೆಯ ಮುಖ್ಯಸ್ಥರಾದ ಭವ್ಯ ನರಸಿಂಹಮೂರ್ತಿ ತಿಳಿಸಿದ್ದಾರೆ.