ಬೆಂಗಳೂರು, ಫೆ. 17- ಸಾಲ ತೀರಿಸಲು ಸಹಾಯ ಮಾಡಿದ ಸಂಬಂಧಿಯನ್ನು ಮನೆಗೆ ಕರೆಸಿಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ಆಂಧ್ರಪ್ರದೇಶದ ಬಳಿ ಬಿಸಾಡಿ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಪತಿಯನ್ನು ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶ ಮೂಲದ ಶೇಕ್ ಬಿ.ಡಿ.ಮೊಹಮದ್ ಗೌಸ್ (39) ಮತ್ತು ಕೌಸರ್ ಅಲಿಯಾಸ್ ಹೀನಾ (27) ಬಂಧಿತ ದಂಪತಿ.
ಆರೋಪಿ ದಂಪತಿ 2012ರಲ್ಲಿ ವಿವಾಹವಾಗಿ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದು ತದನಂತರ ಬೆಂಗಳೂರಿಗೆ ಬಂದು ಹೆಗ್ಗನಹಳ್ಳಿಯ ಗಜಾನನ ನಗರದ 10ನೆ ಅಡ್ಡರಸ್ತೆ ಯ ಕಟ್ಟಡವೊಂದರ 3ನೆ ಮಹಡಿಯ ಮನೆಯಲ್ಲಿ ವಾಸವಾಗಿದ್ದರು.
ಆರೋಪಿ ಶೇಖ್ ಮನೆಯಲ್ಲೇ ಹೊಲಿಗೆ ಯಂತ್ರ ಇಟ್ಟುಕೊಂಡು ಗಾರ್ಮೆಂಟ್ಸ್‍ಗಳಿಗೆ ಪೀಸ್ ವರ್ಕ್ ಮಾಡುವ ವ್ಯವಹಾರ ಮಾಡಿಕೊಂಡಿದ್ದನು. ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಹೆಗ್ಗನಹಳ್ಳಿಯ ಮೌಲ್ವಿಯೊಬ್ಬರ ಬಳಿ ಸಾಲ ಮಾಡಿಕೊಂಡಿದ್ದನು. ಈ ಸಾಲವನ್ನು ತೀರಿಸಲಾಗದೆ ಹೈದ್ರಾಬಾದ್‍ಗೆ ಹೋಗಿದ್ದನು. ಸಾಲ ಕೊಟ್ಟವರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರಿಂದ ಕೌಸರ್‍ನ ಸಂಬಂಧಿ ವಜೀರ್ ಪಾಷಾ ಸಾಲ ತೀರಿಸಲು ಸಹಾಯ ಮಾಡಿದ್ದಾನೆ.
ಸಾಲದ ಬದಲಾಗಿ ತನ್ನೊಂದಿಗೆ ಸಂಬಂಧ ಬೆಳೆಸುವಂತೆ ಕೌಸರ್‍ಗೆ ಒತ್ತಾಯಿಸಿ ಬಲವಂತವಾಗಿ ಆಕೆಯ ಸಂಪರ್ಕ ಬೆಳೆಸಿದ್ದನು. ಈ ವಿಷಯ ಪತಿ ಶೇಕ್‍ಗೆ ಗೊತ್ತಾದಾಗ ವಜೀರ್ ಪಾಷಾನಿಂದ ಕೌಸರ್ ಅಂತರ ಕಾಯ್ದುಕೊಂಡಿದ್ದಳು.
ಇದರಿಂದ ಕೋಪಗೊಂಡ ವಜೀರ್ ಪಾಷಾ ತಾನು ಕೊಟ್ಟಿದ್ದ ಹಣವನ್ನು ವಾಪಸ್ ಕೊಡುವಂತೆ ಆಗಾಗ್ಗೆ ಪೀಡಿಸುತ್ತಿದ್ದರಿಂದ ಆತನ ಕೊಲೆ ಮಾಡಲು ದಂಪತಿ ಸಂಚು ರೂಪಿಸಿದರು. ಅದರಂತೆ 2015 ಮೇ 13 ರಂದು ಶೇಖ್ ಮೊಹಮ್ಮದ್ ಗೌಸ್ ಮನೆಯಲ್ಲಿ ಮಂಚದ ಕೆಳಗೆ ಬಚ್ಚಿಟ್ಟುಕೊಂಡಿದ್ದನು.
ಪತ್ನಿ ಕೌಸರ್ ಮೂಲಕ ವಜೀರ್ ಪಾಷಾನನ್ನು ಅಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ಮನೆಗೆ ಕರೆಸಿಕೊಂಡಿದ್ದು ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಗ ಮೊದಲೇ ಅಂದುಕೊಂಡಂತೆ ಕೌಸರ್ ಸೀರೆಯಿಂದ ಆತನ ಕೊರಳಿಗೆ ಸುತ್ತಿದ್ದಾಳೆ. ಆ ಸಂದರ್ಭದಲ್ಲಿ ಮಂಚದ ಕೆಳಗೆ ಅವಿತುಕೊಂಡಿದ್ದ ಶೇಖ್ ಮೊಹಮ್ಮದ್ ಗೌಸ್ ಆರೋಪಿ ಮೇಲೆ ಬಂದು ಕೊರಳಿಗೆ ಹಾಕಿದ್ದ ಸೀರೆಯನ್ನು ಇಬ್ಬರು ಗಟ್ಟಿಯಾಗಿ ಹಿಡಿದುಕೊಂಡು ಎಳೆದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ನಂತರ ಶವವನ್ನು ದಂಪತಿ ಸೇರಿಕೊಂಡು ದಾರದಿಂದ ಮಗುವಿನ ರೀತಿಯಲ್ಲಿ ಸಣ್ಣದಾಗಿ ಕಟ್ಟಿ ಮನೆಯಲ್ಲಿದ್ದ 2 ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಶವದ ಸುತ್ತಲೂ ವೇಸ್ಟ್ ಬಟ್ಟೆಗಳನ್ನು ಹಾಕಿ ದಾರದಿಂದ ಪಾರ್ಸಲ್ ಮಾಡುವ ಹಾಗೆ ಕಟ್ಟಿದ್ದಾರೆ.
ನಂತರ ಶವವನ್ನು ಮನೆಯ ಅಕ್ಕಪಕ್ಕದವರು ಯಾರೂ ಇಲ್ಲದ ಸಮಯ ನೋಡಿಕೊಂಡು ಅಂದು ಸಂಜೆ 4.30ರ ಸುಮಾರಿನಲ್ಲಿ ವಜೀರ್ ಪಾಷಾ ತಂದಿದ್ದ ಹೊಂಡಾ ಅಕ್ಟೀವಾ ಸ್ಕೂಟರ್‍ನ ಮುಂಭಾಗದಲ್ಲಿ ಇಟ್ಟುಕೊಂಡು ಜಾಲಹಳ್ಳಿ- ಯಲಹಂಕ ಮಾರ್ಗವಾಗಿ ಆಂಧ್ರಪ್ರದೇಶದ ಹಿಂದುಪುರ ರಸ್ತೆಲ್ಲಿರುವ ಕಾವೇಟಿನಾಗೇಪಲ್ಲಿ ರಸ್ತೆಯ ಮೋರಿ ಹತ್ತಿರ ರಾತ್ರಿ 10.30ರ ಸಮಯದಲ್ಲಿ ಪ್ಲಾಸ್ಟಿಕ್ ಚೀಲ ಸಮೇತ ಬಿಸಾಡಿದ್ದಾನೆ.
ತದನಂತರ ದಂಪತಿ ಬೆಂಗಳೂರಿನಲ್ಲಿ ಮನೆ ಖಾಲಿ ಮಾಡಿಕೊಂಡು ಆಂಧ್ರಪ್ರದೇಶದ ಅನಂತಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ತಲೆಮರೆಸಿಕೊಂಡಿದ್ದರು.
2015 ಮೇ 16 ರಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸೋಮೇಂದೆಪಲ್ಲಿ ಪೊಲೀಸ್ ಠಾಣೆಯಲ್ಲಿ ಅನಾಥ ಶವ ಸಿಕ್ಕಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪತ್ತೆಯಾಗದ ಪ್ರಕರಣ ಎಂದು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದರು.
ಪತಿ ಕಾಣೆಯಾದ ಬಗ್ಗೆ ಪತ್ನಿ ಆಯಿಷಾ ಅಂದೇ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಆರೋಪಿಗಳು ಪತ್ತೆ ಆಗದಿದ್ದರಿಂದ ಪ್ರಕರಣವನ್ನು ನಿಶ್ಚಲ ಕಡತದಲ್ಲಿಡಲಾಗಿತ್ತು. ಈ ರೀತಿಯ ಪತ್ತೆಯಾಗದ ಪ್ರಕರಣದಲ್ಲಿ ಕಾಣೆಯಾದ ವ್ಯಕ್ತಿಗಳ ಪತ್ತೆ ಮಾಡಲು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ಅವರು ಠಾಣಾಕಾರಿಗಳಿಗೆ ಸೂಚಿಸಿ ವಿಶೇಷ ತಂಡವೊಂದನ್ನು ರಚಿಸಿದ್ದರು.
ಕಳೆದ ಫೆಬ್ರವರಿ 11 ರಂದು ಆಯಿಷಾ ಅವರು ಠಾಣೆಗೆ ಮತ್ತೆ ಹಾಜರಾಗಿ ನನ್ನ ಗಂಡ ಕಾಣೆಯಾದ ನಂತರ ಅವರಿಗೆ ಪರಿಚಯವಿದ್ದ ಮೊಹಮ್ಮದ್ ಗೌಸ್ ಹಾಗೂ ಆತನ ಪತ್ನಿ ಕೌಸರ್ ಬೆಂಗಳೂರಿನ ಮನೆಯನ್ನು ಖಾಲಿ ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೂ ಎಲ್ಲಿದ್ದಾರೆ ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ ಅವರ ಮೇಲೆ ಅನುಮಾನ ಇದೆ ಎಂದು ಮರುದೂರನ್ನು ನೀಡಿರುತ್ತಾರೆ.
ಈ ನಡುವೆ ಕೌಸರ್ ತಾತ ಮೃತಪಟ್ಟಿದ್ದು ಅವರನ್ನು ನೋಡಲು ಮೊಹಮದ್ ಗೌಸ್ ಮತ್ತು ಕೌಸರ್ ಸುಂಕದಕಟ್ಟೆಯ ಕೆಬ್ಬೇಹಳ್ಳಕ್ಕೆ ಬಂದಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಪೊಲೀಸರು ಕಾರ್ಯಾಚರಣೆ ಕೈಗೊಂಡು ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ವಜೀರ್ ಪಾಷಾನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿರುತ್ತದೆ.
ಇದೀಗ ಆರೋಪಿಗಳ ಬಂಧನದಿಂದ ಕೊಲೆ ಪ್ರಕರಣ ಬೆಳಕಿಗೆ ಬಂದಿರುತ್ತದೆ. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಶಾಂತ್ ಮತ್ತು ಸಬ್‍ಇನ್ಸ್‍ಪೆಕ್ಟರ್ ಮೂರ್ತಿ ಹಾಗೂ ಸಿಬ್ಬಂದಿ ತಂಡ ಈ ಪ್ರಕರಣವನ್ನು ಬೇಸುವಲ್ಲಿ ಯಶಸ್ವಿಯಾಗಿದೆ.
