ಕರ್ನಾಟಕಕ್ಕೆ 2.62 ಲಕ್ಷ ಜೀವರಕ್ಷಕ ರೆಮ್ ಡಿಸಿವಿರ್ ಇಂಜಕ್ಷನ್ ಪೂರೈಕೆ

Spread the love

ನವದೆಹಲಿ, ಮೇ 7- ಕೊರೊನಾ ಸೋಂಕಿತರ ಜೀವರಕ್ಷಕವಾಗಿರುವ ರೆಮ್ ಡಿಸಿವಿರ್ ನ್ನು ಮರು ಹಂಚಿಕೆ ಮಾಡಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೇ 1ರಿಂದ 16ರವರೆಗೆ 2.62 ಲಕ್ಷ ಇಂಜಕ್ಷನ್ ಗಳನ್ನು ಪೂರೈಕೆ ಮಾಡಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು, ಕರ್ನಾಟಕದ ರೆಮ್ ಡೆಸಿವಿರ್ ಹಂಚಿಕೆಯನ್ನು ಮೇ 1ರಿಂದ ಮೇ 16ರವರೆಗೆ 2,62,346ಕ್ಕೆ ಹೆಚ್ಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ರಾಜ್ಯದ ಮನವಿಗೆ ಸ್ಪಂದಿಸಿ ಅಗತ್ಯ ಔಷಧ ಪೂರೈಸುತ್ತಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

ಮೇ 1ರಂದು ರೆಮ್ ಡಿಸಿವಿರ್ ಔಷಧಿಯನ್ನು ಮರು ಹಂಚಿಕೆ ಮಾಡಿದ್ದ ಕೇಂದ್ರ ಸರ್ಕಾರ ಮೇ 9ರವರೆಗೆ ಕರ್ನಾಟಕಕ್ಕೆ 3,01,300 ಇಂಜಕ್ಷನ್ ಗಳನ್ನು ಪೂರೈಸುವ ಭರವಸೆ ನೀಡಿತ್ತು. ಇದಕ್ಕೂ ಮೊದಲು ಏಪ್ರಿಲ್ 24ರಂದುತಿಂಗಳಾಂತ್ಯದವರೆಗೂ 1.22 ಲಕ್ಷ ಇಂಜಕ್ಷನ್ ಗಳನ್ನು ಮಂಜೂರು ಮಾಡಿತ್ತು.

ರೆಮ್ ಡಿಸಿವಿರ್ ಬೇಡಿಕೆ ಹೆಚ್ಚಾದಂತೆ ಪೂರೈಕೆಯಲ್ಲೂ ಕಾಲಕಾಲಕ್ಕೆ ಪರಿಕ್ಷರಣೆ ಮಾಡಲಾಗುತ್ತಿದೆ. ಏಪ್ರಿಲ್ 21ರಿಂದ ಮೇ 9ರವರೆಗೆ ಒಟ್ಟು 3,01,300 ಇಂಜಕ್ಷನ್ ಗಳನ್ನು ಪೂರೈಸುವ ವಾಗ್ದಾನ ಮಾಡಲಾಗಿತ್ತು. ಐದು ಕಂಪೆನಿಗಳು ಉತ್ಪಾದಿಸುವ ರೆಮ್ ಡಿಸಿವಿರ್ ಮೇ 2ರವರೆಗೆ ಒಟ್ಟು 1,39,300 ಇಂಜಕ್ಷನ್ ಗಳನ್ನು ಪೂರೈಸಲಾಗಿದೆ.

ಸದ್ಯ ಕರ್ನಾಟಕದಲ್ಲಿ ಜೀವರಕ್ಷಕ ರೆಮ್ ಡಿಸಿವಿರ್ ಹಾಗೂ ಪ್ರಾಣವಾಯು ಆಮ್ಲಜನಕಕ್ಕೆ ಭಾರೀ ಬೇಡಿಕೆ ಬಂದಿದೆ. ಈ ಎರಡು ಕೇಂದ್ರ ಸರ್ಕಾರ ಅಧೀನದಲ್ಲಿವೇ. ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಔಷಧಿಯನ್ನು ಕೆಲವು ಕಾಳಸಂತೇಕೋರರು ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿದ್ದಾರೆ. 2500 ರೂ.ಗಳ ಮುಖಬೆಲೆಯ ಇಂಜಕ್ಷನ್ 45ರಿಂದ 60 ಸಾವಿರ ರೂಪಾಯಿಗಳ ವರೆಗೆ ಬ್ಲಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡವಾಗುತ್ತಿದೆ.

ಇದನ್ನು ತಡೆಯಲು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುತ್ತಲೇ ಇದ್ದರೂ, ಕಾಳಸಂತೆ ವ್ಯಾಪಾರ ನಿಯಂತ್ರಣಕ್ಕೆ ಬಂದಿಲ್ಲ. ಕೊನೆಗೆ ಮುಕ್ತ ವ್ಯಾಪಾರವನ್ನು ಸ್ತಗಿತಗೊಳಿಸಿ ಅಗತ್ಯ ಇರುವ ಆಸ್ಪತ್ರೆಗಳಿಂದ ಆನ್ ಲೈನ್ ನಲ್ಲಿ ಬೇಡಿಕೆ ಪಡೆದು ರೋಗಿಗಳಿಗೆ ನೇರವಾಗಿ ಘೋಷಣೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೂ ರೆಮ್ ಡಿಸಿವಿರ್ ನ ಕೊರತೆಯಂತೂ ಕಡಿಮೆಯಾಗಿದೆ. ಈಗಲೂ ಅಕ್ರಮವಾಗಿ ಸಾವಿರಾರು ರೂಪಾಯಿಗೆ ಮಾರಾಟವಾಗುತ್ತಿದೆ.

Facebook Comments