ಕಳಚಿತು ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ, ಎಸ್.ಕೆ.ಭಗವಾನ್ ಇನ್ನಿಲ್ಲ

Social Share

ಬೆಂಗಳೂರು,ಫೆ.20 – ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರಾದ ಎಸ್.ಕೆ.ಭಗವಾನ್(90)ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 6 ಗಂಟೆಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಮೂವರು ಗಂಡು ಮಕ್ಕಳು, ಒಬ್ಬ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕಳೆದ 2009ರಲ್ಲಿ ಅವರ ಪತ್ನಿ ನಿಧನರಾಗಿದ್ದರು. ಲವಲವಿಕೆಯಿಂದಲೇ ಇದ್ದ ಭಗವಾನ್ ಅವರಿಗೆ ಕಳೆದ ಶುಕ್ರವಾರ ಹೃದಯಘಾತವಾಗಿ ಆಸ್ಪತ್ರೆಗೆ ಸೇರಿದ್ದರು. ಅವರ ಆಸೆಯಂತೆ ಅವರ ನೇತ್ರಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ ಎಂದು ಅವರ ಪುತ್ರ ಜ್ಯೋತಿಂದರ್ ತಿಳಿಸಿದ್ದಾರೆ.

ಸಹಕಾರನಗರದ ಭಗವಾನ್ ಅವರ ನಿವಾಸದಲ್ಲಿ 12 ಗಂಟೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ತರಲಾಯಿತು. ಇಂದು ಸಂಜೆ 5 ಗಂಟೆ ನಂತರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಇವರ ನಿರ್ದೇಶನದಿಂದ ಮೂಡಿಬಂದ ಹತ್ತಾರು ಚಿತ್ರಗಳು ಕನ್ನಡಿಗರ ಮನೆ ಮನೆಯ ಕಥೆಗಳಾಗಿ ಛಾಪು ಬೀರಿದ್ದವು. ಅಶ್ಲೀಲತೆಯ ಸೋಂಕು ಇಲ್ಲದ ಪರಿಶುದ್ಧ ಮನರಂಜನೆಯ ಚಿತ್ರಗಳನ್ನು ನೀಡಿದ ನಿರ್ದೇಶಕರಲ್ಲಿ ಅಗ್ರಪಂಕ್ತಿಯಲ್ಲಿ ಭಗವಾನ್ ನಿಲ್ಲುತ್ತಾರೆ. ಕನ್ನಡದ ಕಾದಂಬರಿಗಳನ್ನು ಜನಪ್ರಿಯಗೊಳಿಸಿದ ಹೆಗ್ಗಳಿಕೆಯೂ ಇವರದು.

ಛತ್ತೀಸ್‍ಗಢ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಇಡಿ ದಾಳಿ

ದೊರೆ-ಭಗವಾನ್ ಜೋಡಿ ಎಂದೇ ಪ್ರಸಿದ್ದಿ ಪಡೆದು ಕನ್ನಡ ಚಿತ್ರರಂಗದಲ್ಲಿ ಹಲವಕಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು. ವಿಶೇಷವಾಗಿ ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರ ಚಿತ್ರಗಳನ್ನು ನಿರ್ದೇಶಿಸಿದ್ದು, ಅದರಲ್ಲಿ ಕಸ್ತೂರಿ ನಿವಾಸ ಇಂದಿಗೂ ಕೂಡ ಎವರ್‍ಗ್ರೀನ್ ಹಿಟ್ ಚಿತ್ರವಾಗಿದೆ.

ಎಸ್.ಕೆ.ಭಗವಾನ್ 1933ರ ಜುಲೈ 5ರಂದು ಮೈಸೂರಿನಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ ಬೆಂಗಳೂರಿನಲ್ಲಿ ನಡೆಸಿದ್ದರು. ಶಾಲಾ-ಕಾಲೇಜಿನಲ್ಲಿಯೇ ನಾಟಕದ ಬಗ್ಗೆ ಆಸಕ್ತರಾಗಿ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದರು. ಬೇರೆ ಬೇರೆ ನಾಟಕ ತಂಡಗಳು ನೀಡುತ್ತಿದ್ದ ನಾಟಕಗಳಿಂದ ಭಗವಾನ್ ಆಕರ್ಷಿತರಾಗಿದ್ದರು.

ಹಿರಣಯ್ಯ ಮಿತ್ರ ಮಂಡಲಿಯಲ್ಲಿ ದೇವದಾಸಿ ನಾಟಕದ ವಿಮಲೆ ಪಾತ್ರ ಮಾಡಿದರು. ಕರ್ನಾಟಕ ನಾಟಕ ಸಭಾ ಕಂಪನಿ ಪ್ರದರ್ಶಿಸುತ್ತಿದ್ದ ವಿಶ್ವಾಮಿತ್ರ, ಗುಲೇಬಕಾವಲಿ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದ್ದರು.
ಚಲನಚಿತ್ರ ರಂಗದಿಂದ ಆಕರ್ಷಿತಗೊಂಡ ಭಗವಾನ್, ಜಿ.ವಿ.ಅಯ್ಯರ್, ಬಾಲಕೃಷ್ಣ, ನರಸಿಂಹರಾಜು ಪರಿಚಯ ಮಾಡಿಕೊಂಡರು. ಜಿ.ವಿ.ಅಯ್ಯರ್, ಬಾಲಕೃಷ್ಣ ನಾಟಕಗಳಿಗೆ ಬರವಣಿಗೆಯಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದರು. ಸಿನಿಮಾ ರೆಪ್ರೆಸೆಂಟೇಟಿವ್ ಆಗಿ ರಾಜ್ಯವಿಡಿ ಸುತ್ತಿದ್ದರು.

ಭಾಗ್ಯೋದಯ (1956) ಚಿತ್ರಕ್ಕಾಗಿ ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳು ಚಿತ್ರ ಸಾಹಿತ್ಯ ರಚಿಸುವಾಗ ಭಗವಾನ್ ಅವರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಭಗವಾನ್ ಅವರಿಗೆ ದೊರೈರಾಜ್ ಪರಿಚಯವಾಯಿತು. ದೊರೈರಾಜ್ ತಮ್ಮ ಛಾಯಾಗ್ರಹಣದ ಜಗಜ್ಯೋತಿ ಬಸವೇಶ್ವರ ಚಿತ್ರಕ್ಕೆ ಭಗವಾನ್ ಅವರನ್ನು ಸಹಾಯಕ ನಿರ್ದೆಶಕರನ್ನಾಗಿ ನೇಮಿಸಿಕೊಳ್ಳಲು ಶಿಫಾರಸ್ಸು ಮಾಡಿದರು. ಹೀಗೆ ದೊರೈರಾಜ್-ಭಗವಾನ್ ಒಂದಾದರು.

ಮೊದಲು ಭಗವಾನ್ ಅವರು ಎಸ್.ಸಿ.ನರಸಿಂಹಮೂರ್ತಿ ಅವರೊಂದಿಗೆ ಸಂಧ್ಯಾರಾಗ (1966) ಚಿತ್ರವನ್ನು ನಿರ್ದೇಶಿಸಿದ್ದರು. ಅನಂತರ ಇದೇ ಜೋಡಿ ರಾಜದುರ್ಗದ ರಹಸ್ಯ ಚಿತ್ರವನ್ನು ನಿರ್ದೇಶಿಸಿತು. ಕನ್ನಡಕ್ಕೆ ಬಾಂಡ್ ಶೈಲಿಯ ಚಿತ್ರಗಳನ್ನು ಪರಿಚಯಿಸಿದವರಲ್ಲಿ ನಿರ್ದೇಶಕ ದೊರೈ-ಭಗವಾನ್ ಜೋಡಿ ಮೊದಲಿಗರು. ಈ ಇಬ್ಬರೂ ಸೇರಿ ನಿರ್ದೇಶಿಸಿದ ಮೊದಲ ಚಿತ್ರ ಜೇಡರ ಬಲೆ (1965) ಚಿತ್ರದಲ್ಲಿ ರಾಜಕುಮಾರ್-ಜಯಂತಿ ಪ್ರಮುಖ ಪಾತ್ರದಲ್ಲಿದ್ದರು.

ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಭೂಕುಸಿತಕ್ಕೆ 13 ಮನೆ ನಾಶ

ಗೋವಾದಲ್ಲಿ ಸಿಐಡಿ 999 (1968), ಆಪರೇಷನ್ ಜÁಕ್‍ಪಾಟ್‍ನಲ್ಲಿ ಸಿಐಡಿ 999 (1969) ಚಿತ್ರಗಳನ್ನು ಈ ಜೋಡಿ ನಿರ್ದೇಶಿಸಿದರು. ಕಸ್ತೂರಿ ನಿವಾಸ, ಎರಡು ಕನಸು, ಬಯಲುದಾರಿ, ಗಾಳಿಮಾತು, ಚಂದನದ ಗೊಂಬೆ, ಹೊಸಬೆಳಕು, ಬೆಂಕಿಯ ಬಲೆ, ಸಮಯದ ಗೊಂಬೆ, ಯಾರಿವನು, ಗಗನ, ನೀನು ನಕ್ಕರೆ ಹಾಲು ಸಕ್ಕರೆ, ಜೀವನ ಚೈತ್ರ ಮುಂತಾದವು ಭಗವಾನ್ ಅವರು ದೊರೈ ಅವರೊಂದಿಗೆ ನಿರ್ದೇಶಿಸಿದ ಪ್ರಮುಖ ಚಿತ್ರಗಳು. ಮಾಂಗಲ್ಯ ಬಂಧನ (1993) ಭಗವಾನ್ ಒಬ್ಬರೇ ನಿರ್ದೇಶಿಸಿರುವ ಚಿತ್ರ.

ಇವರು ನಿರ್ದೇಶಿಸಿದ ಮುನಿಯನ ಮಾದರಿ (1981-82) ಹಾಗೂ ಜೀವನ ಚೈತ್ರ (1992-93) ಚಿತ್ರಗಳು ರಾಜ್ಯ ಸರ್ಕಾರದಿಂದ ಪ್ರಶಸ್ತಿಗೆ ಪುರಸ್ಕೃತವಾಗಿವೆ. ರಾಜಕುಮಾರ್ ಅಭಿನಯದ ಹಲವು ಸದಭಿರುಚಿಯ ಚಿತ್ರಗಳು ಹಾಗೂ ಕಾದಂಬರಿ ಆಧರಿಸಿದ ಚಿತ್ರಗಳನ್ನು ನಿರ್ದೇಶಿಸಿದ ಕೀರ್ತಿ ಇವರದು.

ಓವೈಸಿ ಮನೆ ಮೇಲೆ ಕಲ್ಲು ತೂರಾಟ

ನಿರ್ದೇಶನ ಮಾಡಿರುವ ಸುಮಾರು 40 ಚಿತ್ರಗಳಲ್ಲಿ 30 ಚಿತ್ರಗಳು ಕಾದಂಬರಿ ಆಧರಿಸಿದ ಚಿತ್ರಗಳಾಗಿವೆ. ಆದರ್ಶ ಚಲನಚಿತ್ರ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 1995-96ನೆ ಸಾಲಿನಲ್ಲಿ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ದೊರೈರಾಜ್ ಅವರೊಂದಿಗೆ ಹಂಚಿಕೊಂಡಿದ್ದಾರೆ. 2010ರಲ್ಲಿ ರಾಜಕುಮಾರ್ ಸೌಹಾರ್ದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Renowned, Kannada, film director, SK Bhagavan, dies,

Articles You Might Like

Share This Article