ದಿನೇಶ್‍ ಗುಂಡೂರಾವ್‌ಗೆ ರೇಣುಕಾಚಾರ್ಯ ಸವಾಲ್

ಬೆಂಗಳೂರು, ಜ.24-ಕಳೆದ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಉಪಚುನಾವಣೆಯಲ್ಲಿ ನಿಮ್ಮ ನೇತೃತ್ವದಲ್ಲಿ ಎಷ್ಟು ಸಂಸದರು, ಶಾಸಕರನ್ನು ಗೆಲ್ಲಿಸಿದ್ದೀರಿ ಎಂಬುದನ್ನು ಹೇಳಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರಿಗೆ ಸವಾಲು ಹಾಕಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ನನ್ನ ಮತ್ತು ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.

ಕಾಂಗ್ರೆಸ್‍ನಲ್ಲೇ ಹತ್ತಾರು ಗುಂಪುಗಳಿದ್ದು, ಮೊದಲು ಅವನ್ನು ಸರಿಪಡಿಸಿಕೊಳ್ಳಿ. ವಿಧಾನಸಭೆ ಉಪಚುನಾವಣೆ ಯಲ್ಲಿ ಹೀನಾಯ ಸೋಲು ಕಂಡ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀರಿ. ಹಾಗೆಯೇ ವಿರೋಧ ಪಕ್ಷದ ನಾಯಕ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಉಳಿದಿವೆ. ಬಿಜೆಪಿಯಿಂದ ನನ್ನನ್ನು ಉಚ್ಛಾಟನೆ ಮಾಡಬೇಕೆಂದು ಹೇಳಿದ್ದೀರಿ.

ದಂಧೆಗಳಲ್ಲಿ ತೊಡಗಿದ್ದ ಆರೋಪ ಇರುವ ಶಾಸಕ ಜಮೀರ್ ಅಹಮ್ಮದ್ ಖಾನ್ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪಕ್ಕೆ ಒಳಗಾಗಿರುವ ಶಾಸಕ ಯು.ಟಿ.ಖಾದರ್ ಅವರನ್ನು ಮೊದಲು ಉಚ್ಚಾಟನೆ ಮಾಡಿ ಎಂದು ಹೇಳಿದರು. ಜಮೀರ್ ಅವರು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೂ ನಿಷ್ಠರಾಗಿಲ್ಲ. ಅಂತಹ ವ್ಯಕ್ತಿ ನನ್ನ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ತಮ್ಮ ಸ್ವಕ್ಷೇತ್ರ ಹೊನ್ನಾಳಿಯಲ್ಲಿ ಮುಸ್ಲಿಂ ಸಮುದಾಯ ನೆಲೆಸಿರುವ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ಅಭಿವೃದ್ಧಿ ಪಡಿಸಿದ್ದರೂ ಚುನಾವಣೆಯಲ್ಲಿ ಆ ಗ್ರಾಮಗಳಲ್ಲಿ ನಿರೀಕ್ಷಿತ ಮತಗಳು ಬಂದಿಲ್ಲ. ಹೀಗಾಗಿ ನೋವಿನಿಂದ ಹೇಳಿದ್ದೆನೆಯೇ ಹೊರತು ಇಡೀ ಸಮುದಾಯವನ್ನೇ ವಿರೋಧಿಸಿಲ್ಲ ಎಂದು ಹೇಳಿದರು.

ಈ ತಿಂಗಳೊಳಗೆ ಸಂಪುಟ ವಿಸ್ತರಣೆ: ಈ ತಿಂಗಳ ಅಂತ್ಯದೊಳಗಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ವಿಶ್ವಾಸವನ್ನು ರೇಣುಕಾಚಾರ್ಯ ವ್ಯಕ್ತಪಡಿಸಿದರು. ವಿದೇಶ ಪ್ರವಾಸ ಮುಗಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಪಸ್ಸಾಗುತ್ತಿದ್ದು, ಹೈಕಮಾಂಡ್ ಜೊತೆ ಸಂಪುಟ ವಿಸ್ತರಣೆ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿದ್ದಾರೆ. ಬಿಜೆಪಿಯಲ್ಲಿ ಲಕೋಟೆ ಸಂಸ್ಕøತಿ ಇಲ್ಲ ಎಂದು ಕಾಂಗ್ರೆಸ್‍ಗೆ ತಿರುಗೇಟು ನೀಡಿದರು.

ನಮಗೆ ಪಕ್ಷದಿಂದ ಯಾವುದೇ ನೋಟೀಸ್ ಬಂದಿಲ್ಲ. ನಾನು ನಮ್ಮ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿ ನನ್ನ ಭಾವನೆ ವ್ಯಕ್ತಪಡಿಸಿದ್ದೇನೆ. ಡಿಸಿಎಂ ಹುದ್ದೆ ಕುರಿತಂತೆ ಈಗಾಗಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.