ಬೆಂಗಳೂರು,ಆ.10-ನಾವು ಮುಂಬರುವ ವಿಧಾನಸಭೆ ಚುನಾವಣೆಯನ್ನು ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರಮಾರ್ಗದರ್ಶನದಲ್ಲಿ ಹೋಗುತ್ತೇವೆ. ಸಾಲು ಸಾಲು ಚುನಾವಣೆ ಸೋತು, ಬೀದಿಗೆ ಬಿದ್ದಿರುವ ಕಾಂಗ್ರೆಸ್ , ಮುಂದಿನ ಚುನಾವಣೆಯ ಸಾರಥ್ಯಯಾರದ್ದು? ಎಂಬುದನ್ನು ತಾಕತ್ತಿದ್ದರೆ ಬಹಿರಂಗಪಡಿಸಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾ ಚಾರ್ಯ ಸವಾಲು ಹಾಕಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರೇ ಮೊದಲು ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದು ಗಬ್ಬೆದ್ದು ನಾರುತ್ತಿದೆ. ಮೊದಲು ಅದನ್ನು ಸರಿಪಡಿಸಿಕೊಳ್ಳಿ. ಯಾರೋ ಕೈ ಸನ್ನೆ ಮಾಡಿದ್ದಕ್ಕೆ ಒಬ್ಬರಿಗೊಬ್ಬರು ಅಪ್ಪಿ ಕೊಂಡಾಕ್ಷಣ ನಮ್ಮಲ್ಲಿ ಎಲ್ಲವೂ ಸರಿ ಇದೆ ಎಂದು ಬೂಟಾಟಿಕೆ ಮಾಡಿದರೆ, ನಂಬಲು ಕರ್ನಾಟಕದ ಜನರು ಮೂರ್ಖರು ಎಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
ಅಧಿಕಾರಕ್ಕೆ ಬಂದೇ ಬಿಟ್ಟೇವು ಎಂದು ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ನಾಯಕರೇ, ನಿಮ್ಮ ಉತ್ಸವಮೂರ್ತಿಯನ್ನು ಯಾವ ಕ್ಷೇತ್ರದಿಂದ ಕಣಕ್ಕೀಳಿಸುತ್ತೀರಿ? ಮೊದಲೇ ಕ್ಷೇತ್ರ ಘೋಷಿಸಿದರೆ, ಮಹಾನಾಯಕ ಖೆಡ್ಡಾ ತೋಡಬಹುದು ಎಂಬ ಭೀತಿ ಕಾಡುತ್ತಿರಬೇಕು. ಉತ್ತರ ಕೊಡುತ್ತೀರಾ ಕಾಂಗ್ರೆಸ್ ನಾಯಕರೇ? ಎಂದು ಪ್ರಶ್ನಿಸಿದ್ದಾರೆ.
1989ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ವೀರೇಂದ್ರ ಪಾಟೀಲ್, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ ಸೇರಿದಂತೆ ಮೂವರು ಸಿಎಂ ಆಗಿದ್ದನ್ನು ಮರೆತುಬಿಟ್ಟಿದ್ದೀರಾ? ಎಂದಿದ್ದಾರೆ. ಅಷ್ಟಕ್ಕೂ ಸಿದ್ದ ರಾಮಯ್ಯ ಅವರನ್ನು 5 ವರ್ಷ ಮುಂದುವರೆಸಿದ್ದು, ಅವರ ಭಾಗ್ಯದ ಯೋಜನೆಗಳಿಂದಲ್ಲ. ಮೋದಿ ಎಂಬ ಮಹಾನಾಯಕನ ಅಲೆಗೆ ಶತಮಾನದ ಇತಿಹಾಸದ ಕಾಂಗ್ರೆಸ್ ಕನಿಷ್ಟ ಪಕ್ಷ ಅಕೃತ ವಿರೋಧ ಪಕ್ಷದ ಸ್ಥಾನಮಾನ ಪಡೆಯಲು ಅರ್ಹತೆ ಪಡೆದಿರಲಿಲ್ಲ ಎಂದು ಟೀಕಿಸಿದ್ದಾರೆ.
ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಕರ್ನಾಟಕದಲ್ಲಿ ಉಸಿರಾಡುತ್ತಿದ್ದ ಸಿದ್ದರಾಮಯ್ಯನವರನ್ನು ಹೋಬ್ಲೆಟ್, ಅರ್ಕಾವತಿ ರೀಡು ಹಗರಣ ಕಂಡುಬಂದಿದ್ದರೂ ರಾಜೀನಾಮೆ ಕೇಳುವ ನೈತಿಕತೆಯನ್ನೆ ನಿಮ್ಮ ಸ್ವಯಂ ಘೋಷಿತ ಹೈಕಮಾಂಡ್ ಕಳೆದುಕೊಂಡಿತ್ತು ಎಂಬುದನ್ನು ಮರೆಯಬೇಡಿ ಎಂದು ಲೇವಡಿ ಮಾಡಿದ್ದಾರೆ.
ಅಧಿಕಾರ ಇಲ್ಲದೆ ನಿರುದ್ಯೋಗಿಯಾಗಿ ಫುಟ್‍ಬಾತ್ ಮೇಲೆ ಬಿದ್ದಿರುವ ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳಿ. ಕೇಂದ್ರ ಮತ್ತು ರಾಜ್ಯದಲ್ಲಿ ನೀವು ತಿಪ್ಪರಲಾಗ ಹಾಕಿದರೂ ಅಕಾರಕ್ಕೆ ಬರುವ ಆಸೆಯನ್ನು ಬಿಟ್ಟು ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.