ರಾಜಕೀಯ ದ್ವೇಷಕ್ಕೆ ಮಗನನ್ನು ಬಲಿ ಪಡೆದಿದ್ದಾರೆ : ರೇಣುಕಾಚಾರ್ಯ

Social Share

ಬೆಂಗಳೂರು,ನ.4- ನನ್ನ ಮೇಲಿನ ರಾಜಕೀಯ ದ್ವೇಷದಿಂದಾಗಿ ಹೇಡಿಗಳು ನನ್ನ ಮಗನನ್ನು ಬಲಿ ತೆಗೆದುಕೊಂಡಿದ್ದಾರೆ. ಅವನ ಬದಲಿಗೆ ನನ್ನನ್ನು ಸಾಯಿಸಬೇಕಾಗಿತ್ತು, ಸೇಡಿಗೆ ನನ್ನ ಸಹೋದರನ ಮಗ ಬಲಿಯಾಗಿದ್ದಾನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ.

ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನ ಸಾವು ಸಹಜ ಸಾವು ಅಲ್ಲ. ಪೊಲೀಸರಿಗೆ ಮೊದಲೇ ಹೇಳಿದ್ದೆ ನನ್ನ ಮಗ ಕಿಡ್ನಾಪ್ ಆಗಿದ್ದಾನೆಂದು. ಆದರೆ ಈಗ ಅವನ ಮೃತದೇಹ ಸಿಕ್ಕಿದೆ ಎಂದು ಕಣ್ಣೀರು ಹಾಕಿದರು.

ರಾಜಕೀಯ ದ್ವೇಷಕ್ಕೆ ತಮ್ಮ ಸಹೋದರನ ಪುತ್ರ ಬಲಿಪಶುವಾಗಿದ್ದಾನೆ. ದ್ವೇಷ ಇದ್ದಿದ್ದರೆ ನನ್ನನ್ನು ಸಾಯಿಸಬೇಕಾಗಿತ್ತು, ನಾನು ಅನುಭವಿಸುತ್ತಿರುವ ನೋವಿಗೆ ಮಿತಿಯೇ ಇಲ್ಲ ಎಂದು ರೋಸಿದ್ದಾರೆ.
ನನ್ನ ಸಹೋದರ ಮಗನ ಸಾವು ಸಹಜ ಸಾವಲ್ಲ, ಅಪಘಾತವೂ ಅಲ್ಲ. ಇದು ಕಾಣದ ಕೈಗಳ ಕೆಲಸ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ನನ್ನ ತಮ್ಮನ ಮಗ ಚಂದ್ರು ಕಾರಿನ ಹಿಂಭಾಗ ಮಲಗಿದ್ದಾನೆ. ದುಷ್ಕರ್ಮಿಗಳು ವ್ಯವಸ್ಥಿತವಾಗಿ ಕಾರನ್ನು ಕಾಲುವೆಗೆ ತಳ್ಳಿದ್ದಾರೆ. ಇದು ಸಹಜ ಸಾವೊ ಇಲ್ಲವೋ ಅಪಘಾತವೊ ಎಂಬುದನ್ನು ನೀವೇ ತೀರ್ಮಾನ ಮಾಡಿ. ಕಾರು ಚಾಲನೆ ಮಾಡುತ್ತಿದ್ದ ಚಂದ್ರ ಹಿಂಬದಿ ಸೀಟಿನಲ್ಲಿ ಇರಬೇಕಿತ್ತು. ಆದರೆ ಹಿಂಬದಿ ಸೀಟಿನಲ್ಲಿ ಮಲಗಿದ್ದಾನೆ. ಹೀಗಾಗಿ ಇದು ಸಹಜ ಸಾವಲ್ಲಎಂದಿದ್ದಾರೆ.

ಇದು ಘನಘೋರ : ಸಕಾಲದಲ್ಲಿ ಚಿಕಿತ್ಸೆ ಸಿಗದೇ ತಾಯಿ ಮತ್ತು ಅವಳಿ ನವಜಾತ ಶಿಶುಗಳ ಸಾವು

ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸಲಿ. ನಮಗೆ ದೇವರೇ ನ್ಯಾಯ ಕೊಡಿಸಬೇಕು. ನನ್ನ ಮಗ ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿದ್ದ. ನಮ್ಮ ಮನೆಯ ನಂದಾದೀಪ ಹಾರಿ ಹೋಗಿದೆ. ಅವನು ನನ್ನ ಜೊತೆ ಕ್ಷೇತ್ರದಲ್ಲಿ ಬೆಂಬಲವಾಗಿದ್ದ. ಜನರ ಪ್ರೀತಿ ಗಳಿಸಿದ್ದ ಈಗ ಅವನನ್ನು ಕಳೆದುಕೊಂಡಿದ್ದೇನೆ ಎಂದು ರೇಣುಕಾಚಾರ್ಯ ದುಃಖತಪ್ತರಾದರು.

ನನ್ನ ಮಗನದ್ದು ವ್ಯವಸ್ಥಿತ ಸಂಚು. ಹೇಡಿಗಳು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಶಿಖಂಡಿಗಳು ಇಂತಹ ಕೆಲಸ ಮಾಡಿದ್ದಾರೆ. ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದಿದ್ದಾರೆ. ಬಿಳಿ ಬಟ್ಟೆಯಿಂದ ಆತನ ಕಾಲು ಕಟ್ಟಿ ಹಾಕಿ ಬರ್ಭರವಾಗಿ ಕೊಲೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಆತ ನಾಪತ್ತೆಯಾದ ದಿನದಿಂದಲೂ ಆತನ ಅಪಹರಣವಾಗಿದೆ ಎಂದು ಹೇಳಿದ್ದೆ. ಚಂದ್ರಶೇಖರ್‍ಗೆ ಕರೆ ಮಾಡಿ ದುಷ್ಕರ್ಮಿಗಳು ಕರೆಸಿಕೊಂಡಿದ್ದಾರೆ. ಕೊಲೆಗಾರರು ಆತನಿಗೆ ಫೋನ್ ಮಾಡಿದಾಗ ಗೌರಿಗದ್ದೆಗೆ ಹೋಗುತ್ತಿರುವುದಾಗಿ ಹೇಳಿದ್ದ. ಆದರೆ ಜೀವಂತವಾಗಿ ವಾಪಸ್ ಬರಲಿಲ್ಲ, ಒಳ್ಳೆಯ ಮನುಷ್ಯನಿಗೆ ದೊರೆತ ಕೆಟ್ಟ ಅಂತ್ಯ ಇದಾಗಿದೆ. ಈ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸಿಎಂ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ಅವರಲ್ಲಿ ಮನವಿ ಮಾಡಿರುವುದಾಗಿ ಹೇಳಿದ್ದಾರೆ.

ನನ್ನ ಮಗ ಬಹಳ ಬೇಗ ಬೆಳೆಯುತ್ತಿದ್ದ. ಸದಾ ಕೇಸರಿ ಶಾಲು, ಪಿಂಕ್ ಶರ್ಟ್ ಧರಿಸುತ್ತಿದ್ದ. ಇದನ್ನು ನೋಡಿ ಕೆಲವರು ಸಹಿಸುತ್ತಿರಲಿಲ್ಲ. ನನ್ನ ರಾಜಕಾರಣಕ್ಕೆ ಬೆನ್ನೆಲುಬಾಗಿ ನಿಂತಿದ್ದ. ನನ್ನ ಮಗನ ಸಾವಿಗೆ ನಾನೇ ಕಾರಣವಾಗಿಬಿಟ್ಟೆ. ಹೇಡಿಗಳು ನನ್ನನ್ನು ಬಲಿ ತೆಗೆದುಕೊಳ್ಳಬೇಕಿತ್ತು, ಆದರೆ ನನ್ನ ಮಗನನ್ನು ಬಲಿ ತೆಗೆದುಕೊಂಡರು ಎಂದು ಮರುಗಿದ್ದಾರೆ.

ಕಳೆದೊಂದು ವಾರದಿಂದ ಹೊನ್ನಾಳಿಯಲ್ಲಿ ಅನುಮಾನಾಸ್ಪದವಾಗಿ ವಾಹನವೊಂದು ಓಡಾಡುತ್ತಿದೆ ಹುಷಾರಾಗಿರಿ ಅಂದಿದ್ದರು. ನಾನು ನಮ್ಮ ಹುಡುಗನಿಗೆ ಹುಷಾರಾಗಿರಲು ಹೇಳಿದ್ದೆ. ಅಷ್ಟರಲ್ಲಿಯೇ ಹೇಡಿಗಳು ಇಂತಹ ಕೆಲಸ ಮಾಡಿಬಿಟ್ಟಿದ್ದಾರೆ ಎಂದು ದುಃಖಿತರಾಗಿದ್ದಾರೆ. ಆರಂಭದಿಂದಲೂ ನಮ್ಮ ಮಗನಿಗೆ ಅಪಾಯವಿರುವ ಬಗ್ಗೆ ನಮಗೆ ಅನುಮಾನವಿತ್ತು, ಇಂದು ಅವನ ಕೊಲೆಯಾಗಿದೆ, ರೇಣುಕಾಚಾರ್ಯ ಅವರ ಮೇಲಿನ ದ್ವೇಷದಿಂದ ನಡೆದ ಕೊಲೆ ಇದಾಗಿದೆ.

ಚಂದ್ರಶೇಖರ್ ಹಾಕಿದ್ದ ಸೀಟ್ ಬೆಲ್ಟ್ ಹಾಗೆಯೇ ಇದೆ, ಹೀಗಿರುವಾಗ ದೇಹ ಹಿಂಬದಿಯ ಸೀಟಿಗೆ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು ಎಂದು ಚಂದ್ರಶೇಖರನ ಚಿಕ್ಕಪ್ಪ ವಿಶ್ವಾರಾಧ್ಯ ಕೂಡ ಒತ್ತಾಯಿಸಿದ್ದಾರೆ.

ನಮ್ಮ ಹುಡುಗನ ಅಂತ್ಯ ಸಂಸ್ಕಾರವನ್ನು ನಮ್ಮ ಹೊಸ ಮನೆ ಬಳಿ ಮಾಡಬೇಕು ಎಂಬುದು ನನ್ನ ಆಸೆ. ಆದರೆ ನಮ್ಮ ಮನೆಯವರು ಒಪ್ಪುತ್ತಿಲ್ಲ. ತೋಟದಲ್ಲಿ ನಮ್ಮ ಹಿರಿಯರನ್ನೆಲ್ಲಾ ಮಾಡಿದ್ದೇವೆ ಅಲ್ಲೇ ಮಾಡಬೇಕು ಎನ್ನುತ್ತಿದ್ದಾರೆ ನೋಡೋಣ ಎಂದಿದ್ದಾರೆ. ಹೀಗಾಗಿ ಅವರ ಅಜ್ಜ, ತಾತನ ಸಮಾ ಇರುವ ಸ್ವಗ್ರಾಮ ಕುಂದೂರಿನಲ್ಲಿ ಅಂತಿಮ ವಿವಿಧಾನಗಳನ್ನು ನೆರವೇರಿಸಲಾಗುತ್ತದೆ ಎಂದು ಹೇಳಿದ್ದಾರೆ.

Articles You Might Like

Share This Article