ರಾಜ್ಯದಲ್ಲಿ ಹೆಚ್ಚುತ್ತಿರುವ ಮೀಸಲಾತಿ ಹೋರಾಟ: ಸರ್ಕಾರ ಮೌನ

Spread the love

ಬೆಂಗಳೂರು,ಫೆ.19- ತೀವ್ರ ಕಗ್ಗಂಟಾಗಿ ಪರಿಣ ಮಿಸಿರುವ ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳ ಹಾಗೂ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತಾಗಿ ಸದ್ಯಕ್ಕೆ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳದೆ ತಟಸ್ಥ ನೀತಿ ಅನುಸರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಯಾವುದೋ ಒಂದು ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಇಲ್ಲವೇ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಿದರೆ ಮುಂದೆ ಬೇರೆ ಬೇರೆ ಸಮುದಾಯಗಳು ಕೂಡ ಇದೇ ರೀತಿ ಒತ್ತಡದ ತಂತ್ರ ಅನುಸರಿಸಬಹುದು.

ಹೀಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾದುನೋಡುವ ನಿರ್ಧಾರಕ್ಕೆ ಬಂದಿದ್ದಾರೆ. ಮೀಸಲಾತಿ ಹೆಚ್ಚಳ ಎಂಬುದು ಜೇನುಗೂಡಿಗೆ ಕಲ್ಲು ಹಾಕಿದಂತೆ. ಒಂದು ಸಮುದಾಯವನ್ನು ಓಲೈಸಿಕೊಳ್ಳಲು ಮುಂದಾದರೆ ನೂರಾರು ಜಾತಿಗಳು ನಾಳೆ ಬೀದಿಗೆ ಬರಲಿವೆ. ಇಲ್ಲದ ಉಸಾಬರಿ ತೆಗೆದುಕೊಳ್ಳುವ ಬದಲು ಕಾದು ನೋಡುವುದೇ ಸರಿಯಾದ ಮಾರ್ಗ ಎಂಬುದು ಬಿಎಸ್‍ವೈ ಲೆಕ್ಕಾಚಾರವಾಗಿದೆ.

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ಸುದೀರ್ಘ ಚರ್ಚೆಯಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಎಲ್ಲವನ್ನೂ ಸಹನೆಯಿಂದಲೇ ಆಲಿಸಿರುವ ಯಡಿಯೂರಪ್ಪ ,ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಆತುರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಬೇಕು.

ಕಾನೂನು ಮತ್ತು ಸಂವಿಧಾನ ತಜ್ಞರು, ಬೇರೆ ಬೇರೆ ರಾಜ್ಯಗಳಲ್ಲಿ ತೆಗೆದುಕೊಂಡಿರುವ ನಿರ್ಣಯಗಳು, ಕುಲಶಾಸ್ತ್ರ ಅಧ್ಯಯನ ಸೇರಿದಂತೆ ಪ್ರತಿಯೊಂದು ಮಾಹಿತಿಗಳನ್ನು ಪಡೆಯಬೇಕು. ನಂತರ ಎಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ತೀರ್ಮಾನ ಕೈಗೊಳ್ಳುತ್ತೇನೆ. ನನ್ನ ಮೇಲೆ ಯಾರೊಬ್ಬರೂ ಒತ್ತಡ ಹಾಕಬಾರದೆಂದು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಚಿವರ ನಡುವೆ ಮಾತಿನ ಚಕಮಕಿ: ಮೀಸಲಾತಿ ಹೆಚ್ಚಳ ಕುರಿತಂತೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಗೊತ್ತಾಗಿದೆ.
ಸಂಪುಟ ಸಭೆ ಆರಂಭವಾಗುತ್ತಿದ್ದಂತೆ ಪಂಚಮಸಾಲಿ ಸಮುದಾಯಕ್ಕೆ 2ಎ ನೀಡುವುದಕ್ಕಿಂತ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಚಿವ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಇದರಿಂದಾಗಿ ಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿ, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ವಿರುದ್ಧ ಸಚಿವ ನಿರಾಣಿ, ಸಿ.ಸಿ ಪಾಟೀಲ್ ಮತ್ತಿತರರು ತಿರುಗಿಬಿದ್ದರು.
ಬಣಜಿಗ ಲಿಂಗಾಯತರನ್ನ ನಿಮ್ಮ ಆಡಳಿತಾವಧಿಯಲ್ಲಿ ನೀವು ಹೇಗೆ 2ಎಗೆ ಸೇರಿಸಿದ್ದೀರಿ..? ಪಂಚಮಸಾಲಿಗೆ 2ಎ ಕೊಟ್ಟರೆ ನಿಮಗೇನು ತೊಂದರೆ ಏನು ಎಂದು ಪ್ರಶ್ನಿಸಿದ್ದಾಗಿ ತಿಳಿದುಬಂದಿದೆ.

ಗದ್ದಲ ಹೆಚ್ಚಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ವೇಳೆ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ವಾಲ್ಮೀಕಿ ಸಮುದಾಯ ಎಸ್ಟಿ ಮೀಸಲಾತಿಯನ್ನು ಶೇ.3.5ರಿಂದ ಶೇ.7ಕ್ಕೆ ಹೆಚ್ಚಿಸಬೇಕೆಂದು ಹಲವೂ ದಿನಗಳಿಂದ ಹೋರಾಟ ಮಾಡುತ್ತಿದೆ. ರಾಜ್ಯ ಸರ್ಕಾರ ಇದನ್ನ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿ. ಸಮುದಾಯದ ಶಾಸಕರು, ಸಂಸದರು, ಸ್ವಾಮೀಜಿಗಳು ಸೇರಿದಂತೆ ಹಲವರು ಈ ವಿಚಾರದ ಬಗ್ಗೆ ಗಂಭೀರವಾಗಿದ್ದಾರೆ. ಸರ್ಕಾರ ಯಾವುದಾದರೊಂದು ನಿರ್ಧಾರ ಕೈಗೊಳ್ಳಬೇಕೆಂದು ಒತ್ತಡ ಹಾಕಿದರು.

ಆಗ ಸಚಿವ ಕೆ.ಎಸ್. ಈಶ್ವರಪ್ಪ ಕೂಡ, ಈಗಾಗಲೇ ಬೃಹತ್ ಪಾದಯಾತ್ರೆ ಮೂಲಕ ಕುರುಬ ಸಮುದಾಯ ಎಸ್ಟಿ ಮೀಸಲಾತಿಗೆ ಆಗ್ರಹಿಸಿದೆ. ಹೀಗಾಗಿ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ಪರಿಗಣಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿ ಎಂದು ಆಗ್ರಹಿಸಿದರು. ಸಚಿವ ಆರ್.ಅಶೋಕ್ ಮಾತನಾಡಿ, ಒಕ್ಕಲಿಗರು ಸಹ ತಮ್ಮದೇ ಹಳೆಯ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಸರ್ಕಾರ ಈ ಬೇಡಿಕೆಯನ್ನೂ ಸಹ ಪರಿಗಣಿಸಬೇಕಿದೆ ಎಂದರು.

ಮತ್ತೆ ಮಧ್ಯಪ್ರವೇಶಿಸಿದ ಸಚಿವ ಮುರುಗೇಶ್ ನಿರಾಣಿ ಹಾಗೂ ಸಿ.ಸಿ ಪಾಟೀಲ್ ಅವರು, ಲಿಂಗಾಯತರಲ್ಲಿ ಪಂಚಮಸಾಲಿ ಅತಿದೊಡ್ಡ ಸಮುದಾಯ. ಹೀಗಾಗಿ 2ಎ ಮೀಸಲಾತಿ ಮಾಡುವುದರಲ್ಲಿ ಯಾವುದೇ ತೊಡಕಿಲ್ಲ. ಸರ್ಕಾರ ಫೆಬ್ರವರಿ 21ರ ಸಮಾವೇಶದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಶುಭಸುದ್ದಿ ನೀಡಬೇಕು, ಪಂಚಮಸಾಲಿ ಸಮುದಾಯದ ಬೇಡಿಕೆ ನ್ಯಾಯಬದ್ದವಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಲಿ ಎಂದು ಮನವಿ ಮಾಡಿದರು.

ಈ ನಾಲ್ವರು ಸಚಿವರ ನಡುವೆ ನಡೆದ ವಾಕ್ಸಮರ ತಾರಕ್ಕೇರಿದಾಗ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಮಾಧಾನಪಡಿಸಲು ಹರಸಾಹಸಪಟ್ಟರು. ಸಚಿವರ ಗದ್ದಲದಿಂದ ಅಸಮಾಧಾನಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾಗಿ ನೀವೇ ನೀವೇ ಕೂಗಾಡಿದರೆ ಹೇಗೆ..? ನಮ್ಮ ಮಾತನ್ನ ಕೂಡ ಕೇಳಬೇಕಲ್ಲವೇ.. ಹೀಗೆ ಚರ್ಚಿಸುವುದಾದರೆ ನೀವೇ ತೀರ್ಮಾನ ಮಾಡಿಕೊಳ್ಳಿ. ಇನ್ನು ಮುಂದೆ ಸಮುದಾಯದ ಮೀಸಲಾತಿ ಸಮಾವೇಶಗಳಲ್ಲಿ ಸರ್ಕಾರದ ಸಚಿವರು ಪಾಲ್ಗೊಳ್ಳುವುದು ಬೇಡ. ಪಾಲ್ಗೊಂಡರೆ ಇತರೆ ಸಮುದಾಯಗಳಿಗೆ ಬೇರೆ ಸಂದೇಶವೇ ಹೋಗುತ್ತದೆ ಎಂದು ಗರಮ್ಮಾದರು.

ಸಮುದಾಯ ಬಿಟ್ಟು ರಾಜಕೀಯವಿಲ್ಲ. ರಾಜಕೀಯ ಬಿಟ್ಟು ಸಮುದಾಯವಿಲ್ಲ. ಸಮುದಾಯಕ್ಕೆ ಶ್ರಮಿಸಬೇಕಾಗುತ್ತೆ. ಒಂದು ವೇಳೆ ಸಮುದಾಯದ ಸ್ವಾಮೀಜಿಗಳು, ನಾಯಕರು ಸಮಾವೇಶಕ್ಕೆ ಆಹ್ವಾನ ನೀಡಿದರೆ ಹೋಗಲೇಬೇಕಾಗುತ್ತೆ. ಪಂಚಮಸಾಲಿ ಸಮಾವೇಶಕ್ಕೆ ಆಹ್ವಾನ ನೀಡಿದರೆ ಸಮುದಾಯದ ಪ್ರತಿನಿಧಿಗಳಾಗಿ ನಾವು ಪಾಲ್ಗೊಳ್ಳುತ್ತೇವೆ ಹೊರತು, ಸರ್ಕಾರದ ಪರವಾಗಲ್ಲ. ಹೀಗಾಗಿ ಪಂಚಮಸಾಲಿ ಸಮಾವೇಶದ ಬೇಡಿಕೆ ಪತ್ರ ಸ್ವೀಕರಿಸಲು ಡಿಸಿಎಂ ಅಶ್ವಥ್‍ನಾರಾಯಣ್ ಅವರನ್ನು ಕಳಿಸೋಣ. ಅವರೇ ಮನವಿ ಪತ್ರ ಸ್ವೀಕರಿಸಲಿ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

Facebook Comments