ಬೆಂಗಳೂರು,ಆ.8-`ದುರ್ಭಿಕ್ಷದಲ್ಲಿ ಅಧಿಕಮಾಸ’ ಎಂಬಂತೆ ಕೋವಿಡ್, ಹಣದುಬ್ಬರ, ನಿರುದ್ಯೋಗ ಹೆಚ್ಚಳ, ದುಬಾರಿ ವೆಚ್ಚಗಳ ನಡುವೆ ಬ್ಯಾಂಕ್ ಬಡ್ಡಿ ದರ ಏರಿಕೆ ಮಧ್ಯಮ ವರ್ಗ ಹಾಗೂ ಬಡವರನ್ನು ಶೋಷಿಸಲಾರಂಭಿಸಿದೆ.
ಆರ್‍ಬಿಐನ ವಿತ್ತ ನಿರ್ವಹಣಾ ಸಮಿತಿಯಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ನಿರಂತರವಾಗಿ ಮೂರು ಬಾರಿ ರೆಪೊ ದರವನ್ನು ಪರಿಷ್ಕರಣೆ ಮಾಡಲಾಗಿದೆ.
ಇದರಿಂದ ಬ್ಯಾಂಕ್‍ಗಳ ಸಾಲದ ಬಡ್ಡಿದರ ಶೇ.1.4ರಷ್ಟು ಹೆಚ್ಚಾಗಿದೆ. ಕೋವಿಡ್ ವೇಳೆ ಜನಜೀವನ, ಆರ್ಥಿಕ ಚಟುವಟಿಕೆಗಳು, ಉತ್ಪಾದನೆ, ಜೀವನೋಪಾಯ ಪರಿಸ್ಥಿತಿ ಪಾಶ್ರ್ವವಾಯು ಪೀಡಿತವಾಗಿದ್ದವು. ಪದೇ ಪದೇ ಮೂರನೇ ಅಲೆ, 4ನೇ ಅಲೆ ಹೆಸರಿನಲ್ಲಿ ಬಿತ್ತಿದ ಭಯ ಒಂದಿಷ್ಟು ಕಾಲ ಜನಜೀವನ ಸುಧಾರಣೆಗೆ ಅವಕಾಶ ನೀಡಲಿಲ್ಲ. ಹಾಗೂ ಹೀಗೂ ಹರಸಾಹಸಪಟ್ಟು ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುವ ಹಂತದಲ್ಲಿ ಆರ್‍ಬಿಐನ ರೆಪೊ ಪರಿಷ್ಕರಣೆ ಗಾಯದ ಮೇಲೆ ಬರೆ ಎಳೆದಿದೆ.
ಹಣದುಬ್ಬರ ಸಹನೀಯ ಮಟ್ಟ ಶೇ.6ನ್ನು ದಾಟಿ 6.7ರಷ್ಟಾಗಿದ್ದು, ಜನಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ದುಬಾರಿಯಾಗಿದೆ. ಹೀಗಾಗಿ ಆರ್ಥಿಕ ಸುಧಾರಣೆಗಾಗಿ ರೆಪೊ ದರ ಪರಿಷ್ಕರಣೆ ಅನಿವಾರ್ಯ ಎಂಬ ಸಬೂಬನ್ನು ಆರ್‍ಬಿಐ ಹೇಳುತ್ತಿದೆ.
ರೆಪೊ ಪರಿಷ್ಕರಣೆ ಬಳಿಕ ಬ್ಯಾಂಕ್‍ಗಳಿಗೆ ಸುಮಾರು 5 ಲಕ್ಷ ಕೋಟಿ ನಗದು ಹರಿದುಬಂದಿದ್ದು, ಹಣದುಬ್ಬರ ನಿಯಂತ್ರಣವಾಗುತ್ತಿದೆ ಎಂದಿದೆ. ಆದರೆ ಕಳೆದೆರಡು ತಿಂಗಳಿನಿಂದಲೂ ಮಾಸಿಕ ಸೂಚ್ಯಂಕದ ಪ್ರಕಾರ ಹಣದುಬ್ಬರ ನಿಯಂತ್ರಣಕ್ಕೆ ಬರುವ ಬದಲಾಗಿ ಏರಿಕೆಯಾಗುತ್ತಲೇ ಇದೆ.
ಆರ್‍ಬಿಐನ ಮುನ್ಸೂಚನೆ ಪ್ರಕಾರವೇ ಮುಂದಿನ ಆರ್ಥಿಕ ವರ್ಷದ ತ್ರೈಮಾಸಿಕದಲ್ಲಿ ಹಣದುಬ್ಬರ ಶೇ.7.2ರಷ್ಟಾಗುವ ಆತಂಕವಿದೆ. ಇದು ಬಾಣಲೆಯಿಂದ ಬೆಂಕಿಗೆ ಬಿದ್ದಂತಹ ವಿಪರೀತ ಪರಿಸ್ಥಿತಿ ಎಂಬ ಆತಂಕಗಳು ವ್ಯಕ್ತವಾಗುತ್ತಿವೆ.
ಒಂದೆಡೆ ರೆಪೊ ಪರಿಷ್ಕರಣೆಯಾಗಿ ಬ್ಯಾಂಕ್ ನೀಡಿದ್ದ ಸಾಲಗಳ ಮೇಲಿನ ಬಡ್ಡಿದರ ಏರಿಕೆಯಾಗಿದೆ. ಶೇ.1.4ರಷ್ಟು ಬಡ್ಡಿ ಹೆಚ್ಚಳದಿಂದ ವಾರ್ಷಿಕ ಸಾಲಗಳ ಮೇಲಿನ ಮರುಪಾವತಿ ಪ್ರಮಾಣ ಹೆಚ್ಚಾಗಿದೆ. ಮಾಸಿಕ ಕಂತುಗಳಲ್ಲೂ ಕೂಡ ಏರಿಕೆಯಾಗಿದೆ.
ಬಡ್ಡಿದರ ಸಹನೀಯ ಮಿತಿಯಲ್ಲಿದ್ದರೆ ಬ್ಯಾಂಕ್‍ಗಳು ಮಾಸಿಕ ಕಂತಿನ ಮೊತ್ತವನ್ನು ಹೆಚ್ಚಿಸುವ ಬದಲು ಕಂತುಗಳ ಅವಧಿಯನ್ನು ವಿಸ್ತರಣೆ ಮಾಡುತ್ತವೆ. ಆದರೆ ಸಹನೀಯ ಮಿತಿ ದಾಟಿದರೆ ಅನಿವಾರ್ಯವಾಗಿ ಕಂತುಗಳ ಮೊತ್ತವನ್ನೇ ಹೆಚ್ಚಿಸಬೇಕಾಗುತ್ತದೆ.
ಕಳೆದ ಎರಡು ಬಾರಿ ರೆಪೋ ಪರಿಷ್ಕರಣೆಯಾದಾಗ ಮಾಸಿಕ ಕಂತುಗಳನ್ನು ವಿಸ್ತರಣೆ ಮಾಡಿ ಗ್ರಾಹಕರಿಗೆ ಹೊರೆಯಾಗದಂತೆ ನಿರ್ವಹಣೆ ಮಾಡಲಾಗಿತ್ತು. ಆದರೆ 3ನೇ ಬಾರಿ 50 ಅಂಶಗಳ ಆಧಾರದ ಮೇಲೆ ರೆಪೋ ಪರಿಷ್ಕರಣೆಯಾಗಿ ಶೇ.5.4ರಷ್ಟಾಗಿರುವುದರಿಂದ ಬ್ಯಾಂಕ್ ಸಾಲದ ಮಾಸಿಕ ಕಂತುಗಳ ಮೊತ್ತದಲ್ಲೂ ಏರಿಕೆಯಾಗಿದೆ.
ಮುನ್ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ಆರ್‍ಬಿಐ ರೆಪೋವನ್ನು ಮತ್ತಷ್ಟು ಏರಿಕೆ ಮಾಡಿ ಶೇ.6ಕ್ಕೆ ಸ್ಥಿತೀಕರಿಸುವ ಸಾಧ್ಯತೆ ಇದೆ. ಇದು ನಡೆದಿದ್ದೇ ಆದರೆ ಬ್ಯಾಂಕ್ ಸಾಲದ ಬಡ್ಡಿ ಮತ್ತು ಕಂತು ಪಾವತಿಸಲಾಗದೆ ಜನಸಾಮಾನ್ಯರು ಶೂಲಕ್ಕೆ ಸಿಲುಕಿ ನರಳುವಂತಾಗುತ್ತದೆ. ಕೈಗಾರಿಕೆಗಳು ಬಹುತೇಕ ಮುಚ್ಚಿ ಹೋಗುವ ಪರಿಸ್ಥಿತಿ ಬರುತ್ತದೆ.
ಈಗಿನ ನಿಯಮಾವಳಿಗಳು ಮತ್ತು ಕಟ್ಟುಪಾಡುಗಳಲ್ಲಿ ಸಾಕಷ್ಟು ನಗದು ದ್ರವ್ಯವನ್ನು ಸಂಗ್ರಹಿಸಿಕೊಟ್ಟುಕೊಂಡು, ಅದನ್ನು ಬಳಕೆ ಮಾಡಿ ಉದ್ಯಮ ಅಥವಾ ಕೈಗಾರಿಕೆ ಆರಂಭಿಸಲು ಸಾಧ್ಯವಿಲ್ಲ. ಸಾಲದ ಮೇಲೆ ಅವಲಂಬನೆ ಅನಿವಾರ್ಯ. ಆದರೆ ಸಾಲ ಪಡೆದವರು ಮರು ಪಾವತಿಸಲಾಗದಂತಹ ವ್ಯವಸ್ಥೆ ರೂಪಿಸುತ್ತಿರುವುದು ಕ್ರೂರತೆಯ ಉತ್ತುಂಗಕ್ಕೆ ಸಾಕ್ಷಿ.
ಬ್ಯಾಂಕ್‍ನಿಂದ ಪಡೆದ ಸಾಲಕ್ಕೆ ಬಡ್ಡಿದರ ಏರಿಕೆಯಾಗಿದೆ. ಅದೇ ವೇಳೆ ಆರ್‍ಬಿಐ ರಿವರ್ಸ್ ರೆಪೋವನ್ನು ಪರಿಷ್ಕರಣೆ ಮಾಡಿದ್ದು, ಬ್ಯಾಂಕ್‍ಗಳಲ್ಲಿ ಇಟ್ಟಿರುವ ಠೇವಣಿಯ ಬಡ್ಡಿ ಕೂಡ ಹೆಚ್ಚಳವಾಗಿ ಗ್ರಾಹಕರಿಗೆ ಲಾಭವಾಗಬೇಕಿತ್ತು. ಆದರೆ ಈವರೆಗಿನ ಮಾಹಿತಿ ಪ್ರಕಾರ ಬ್ಯಾಂಕ್‍ಗಳು ರಿವರ್ಸ್ ರೇಪೋ ಪರಿಷ್ಕರಣೆಯನ್ನು ಅನುಷ್ಠಾನಗೊಳಿಸಿಲ್ಲ.
1ಹೀಗಾಗಿ ದೇಶದ ಆರ್ಥಿಕ ವ್ಯವಸ್ಥೆ ಡೋಲಾಯಮಾನ ಸ್ಥಿತಿಯಲ್ಲಿದೆ. ಜಾಗತಿಕವಾಗಿ ಕೋವಿಡ್‍ನಿಂದ ಚೇತರಿಸಿಕೊಳ್ಳಲಾಗದೆ ಅಮೆರಿಕ, ಯೂರೋಪ್ ದೇಶಗಳು ಮುಂದಿನ ವರ್ಷದ ವೇಳೆಗೆ ಆರ್ಥಿಕ ಕುಸಿತ ಅನುಭವಿಸಲಿದೆ ಎಂಬ ಮುನ್ಸೂಚನೆ ಇದೆ.
ಭಾರತ ಚೇತರಿಸಿಕೊಳ್ಳುವ ಹಂತದಲ್ಲೇ ಆರ್‍ಬಿಐ ನಿಯಮಗಳು ಶೋಷಣೆ ಆರಂಭಿಸಿದ್ದು ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.3