ಇಬ್ಬರು ಸಚಿವರ ರಾಜೀನಾಮೆ..? ಬಿಜೆಪಿಯಲ್ಲಿ ಅಲ್ಲೋಲ್ಲ ಕಲ್ಲೋಲ..!

ಬೆಂಗಳೂರು,ಜ.25-ಏಕಾಏಕಿ ತಮ್ಮ ಖಾತೆಯನ್ನು ಬದಲಾವಣೆ ಮಾಡಲು ತೀರ್ಮಾನಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿರ್ಧಾರದ ವಿರುದ್ಧ ಸೆಡ್ಡು ಹೊಡೆದಿರುವ ಇಬ್ಬರು ಸಚಿವರು ನಾಳೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.  ಸಚಿವರಾದ ಜೆ.ಸಿ.ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ನಾಳೆ ಮಧ್ಯಾಹ್ನ ರಾಜಭವನಕ್ಕೆ ತೆರಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವೇಳೆ ಈ ಇಬ್ಬರು ಸಚಿವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಆಡಳಿತಾರೂಢ ಬಿಜೆಪಿಯಲ್ಲಿ ದೊಡ್ಡ ಅಲ್ಲೋಲ್ಲಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಬೆಳವಣಿಗೆಗಳ ನಡುವೆಯೇ ಸಂಪುಟದಲ್ಲಿ ಸ್ಥಾನಮಾನ ಸಿಗದೆ ಕುದಿಯುತ್ತಿರುವ ಅಸಮಾಧಾನಿತ ಶಾಸಕರು ಗುರುವಾರ ಅಥವಾ ಶುಕ್ರವಾರ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಕಳೆದ ವಾರ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಸಣ್ಣ ನೀರಾವರಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಅವರುಗಳ ಖಾತೆಗಳನ್ನು ದಿಢೀರನೆ ಬದಲಾವಣೆ ಮಾಡಲಾಗಿತ್ತು.  ಮಾಧುಸ್ವಾಮಿ ಬಳಿ ಇದ್ದ ಸಣ್ಣ ನೀರಾವರಿ ಖಾತೆಯನ್ನು ಹಿಂಪಡೆದು ವೈದ್ಯಕೀಯ ಶಿಕ್ಷಣ ಖಾತೆ, ಅರಣ್ಯ ಖಾತೆ ಬದಲಿಗೆ ಪ್ರವಾಸೋದ್ಯಮ ಖಾತೆಯನ್ನು ಆನಂದ್ ಸಿಂಗ್‍ಗೆ ನೀಡಲಾಗಿತ್ತು.

ಇದೀಗ ಬದಲಾದ ಪರಿಸ್ಥಿತಿಯಲ್ಲಿ ಆನಂದ್ ಸಿಂಗ್ ಅವರ ಖಾತೆಯನ್ನು ಮತ್ತೆ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ. ಮಾಧುಸ್ವಾಮಿಗೆ ವೈದ್ಯಕೀಯ ಶಿಕ್ಷಣ ಖಾತೆ ಬದಲಿಗೆ ಪ್ರವಾಸೋದ್ಯ ನೀಡಿರುವುದರಿಂದ ಬೇಸರಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರಕ್ಕೆ ಬಂದಿದ್ದಾರೆ.  ತುಮಕೂರಿನಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬಳಿಕ ರಾಜೀನಾಮೆ ಕೊಡಲಿದ್ದಾರೆ.

ಇದರ ನಡುವೆ ಪ್ರವಾಸೋದ್ಯಮ ಖಾತೆಯನ್ನು ಕಿತ್ತುಕೊಂಡು ಮೂಲಭೂತ ಸೌಕರ್ಯ, ಪರಿಸರ ಹಾಗೂ ಜೈವಿಕ ಪರಿಸರ ಖಾತೆಯನ್ನು ಆನಂದ್‍ಸಿಂಗ್ ನೀಡಲು ಸಿಎಂ ತೀರ್ಮಾನಿಸಿದ್ದಾರೆ.  ಇದರಿಂದ ಬೇಸತ್ತಿರುವ ಆನಂದ್ ಸಿಂಗ್ ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಆಪ್ತರ ಬಳಿ ಈಗಾಗಲೇ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

# ಶಾಸಕರ ಸಭೆ:

ಇನ್ನು ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ಕೆಲ ಶಾಸಕರು ಮತ್ತೆ ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಗುರುವಾರ ಅಥವಾ ಶುಕ್ರವಾರ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.  ಶಾಸಕರಾದ ರಾಜುಗೌಡ ನಾಯಕ್, ಶಿವನಗೌಡ ನಾಯಕ್, ಶಿವರಾಜ್ ಪಾಟೀಲ್, ಪ್ರೊ.ಲಿಂಗಣ್ಣ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಪೂರ್ಣಿಮಾ ಶ್ರೀನಿವಾಸ್, ಶಂಕರ್ ಪಾಟೀಲ್ ಮುನ್ನೇನಕೊಪ್ಪ, ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಶಾಸಕರು ಸಭೆ ಸೇರುವ ತೀರ್ಮಾನಕ್ಕೆ ಬಂದಿದ್ದಾರೆ.

ಈ ಹಿಂದೆಯೂ ಇವರು ಸಭೆ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೆಲವು ತೀರ್ಮಾನಗಳಿಗೆ ವಿರೋಧ ವ್ಯಕ್ತಪಡಿಸಿದ್ದರು.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರ ಒತ್ತಡಕ್ಕೆ ಮಣಿದು ಪುನಃ ಅವರಿಗೆ ವೈದ್ಯಕೀಯ ಖಾತೆಯನ್ನು ನೀಡಿರುವುದಕ್ಕೆ ಬಿಜೆಪಿಯ ಶಾಸಕರು ಅಸಮಾಧಾನಗೊಂಡಿದ್ದಾರೆ.

ಸಿಎಂ ಅವರು ಸುಧಾಕರ್ ಅವರ ಬ್ಲಾಕ್‍ಮೇಲ್ ಒತ್ತಡಕ್ಕೆ ಮಣಿದು ಪುನಃ ಅದೇ ಖಾತೆಯನ್ನು ನೀಡಿದ್ದಾರೆ. ನಾವು ಮೂರ್ನಾಲ್ಕು ಬಾರಿ ಗೆದ್ದು ಬಂದಿದ್ದರೂ ಸುಮ್ಮನಿದ್ದೇವೆ. ಅನ್ಯ ಪಕ್ಷಗಳಿಂದ ವಲಸೆ ಬಂದವರ ವರ್ತನೆ ಅತಿಯಾಗಿದೆ. ಸಭೆಯಲ್ಲಿ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಪ್ರಮುಖರೊಬ್ಬರು ತಿಳಿಸಿದ್ದಾರೆ.