ಕೊರೊನಾ, ಓಮಿಕ್ರಾನ್ ತಡೆಗೆ ರಾಜ್ಯದಲ್ಲಿ ಮತ್ತಷ್ಟು ಬಿಗಿ ಕ್ರಮ..

Social Share

ಬೆಂಗಳೂರು,ಜ.1- ರಾಜ್ಯದಲ್ಲಿ ಕೋವಿಡ್ ಮತ್ತು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ನೆರೆಯ ಮಹಾರಾಷ್ಟ್ರ, ತಮಿಳುನಾಡು ಮತ್ತಿತರ ಕಡೆ ಈಗಾಗಲೇ ಕೋವಿಡ್ ನಿಯಂತ್ರಣಕ್ಕೆ ಅಂದಿನ ಸರ್ಕಾರ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿ ರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಈಗಿರುವ ನಿಯಮಗಳ ಜೊತೆ ಮತ್ತಷ್ಟು ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಾಗಿದೆ.
ಈಗಾಗಲೇ ಜ.7ರವರೆಗೆ ಮುಂಜಾ 5 ಗಂಟೆವರೆಗೆ ನೈಟ್ ಕಫ್ರ್ಯೂ ಹಾಕಲಾಗಿದೆ. ಇದರ ಜೊತೆಗೆ ಸಾಧ್ಯವಾದರೆ ನೈಟ್ ಕಫ್ರ್ಯೂ ಸಮಯವನ್ನು ಇನಷ್ಟು ವಿಸ್ತರಣೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಅತಿಹೆಚ್ಚಿನ ಸಕ್ರಿಯ ಸೋಂಕು ಪ್ರಕರಣಗಳಿರುವ ಎಂಟು ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದ್ದು, ಕೆಲವು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಅಲ್ಲದೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದರಿಂದ ಸರ್ಕಾರ ಬರುವ ದಿನಗಳಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತರುವ ಬಗ್ಗೆ ಆಲೋಚಿಸಿದೆ. ಪ್ರಮುಖವಾಗಿ ವಿದೇಶದಿಂದ ಬರುವ ಪ್ರಯಾಣಿಕರಿಗೆ ಈಗಿರುವ ಒಂದು ವಾರ ಹೋಂ ಕ್ವಾರಂಟೈನ್ ಬದಲಿಗೆ 15 ದಿನಗಳ ಕಡ್ಡಾಯ ಹೋಂ ಕ್ವಾರಂಟೈನ್ ಮಾಡುವುದು, 5ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದರೆ ಅಂತಹ ಅಪಾರ್ಟ್ಮೆಂಟ್ಗಳನ್ನು ಕಂಟೋನ್ಮೆಂಟ್ ವಲಯ ಎಂದು ಘೋಷಿಸಲಾಗುವುದು.
ಇದರ ಜೊತೆಗೆ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು, ರೆಸಾರ್ಟ್, ಪಬ್, ಲೈವ್ಬ್ಯಾಂಡ್ಗಳು, ಡಾಬಾಗಳು, ಡಿಸ್ಕೊತೆಕ್ ಮತ್ತಿತರ ಕಡೆ ಮತ್ತಷ್ಟು ಬಿಗಿಯಾದ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಸಂಭವವಿದೆ. ಬೇಸಿಗೆ ಆಗಿರುವುದರಿಂದ ಜನತೆ ಕುಟುಂಬ ಸಮೇತ ಪ್ರವಾಸಿ ತಾಣಗಳಿಗೆ ಹೋಗುವ ಸಾಧ್ಯತೆ ಹೆಚ್ಚು. ವಿಶೇಷವಾಗಿ ಕರಾವಳಿ ತೀರ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಪ್ರಮುಖ ತಾಣಗಳಾದ ಚಿಕ್ಕಮಗಳೂರು, ಕೊಡುಗು, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಅನೇಕ ಕಡೆ ನಿರ್ಬಂಧ ಹಾಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಹೆಚ್ಚು ಜನರು ಗುಂಪುಗೂಡುವುದರಿಂದ ಓಮಿಕ್ರಾನ್ ಸೋಂಕು ಬಹುಬೇಗನೆ ಸಮುದಾಯಕ್ಕೆ ಹರಡಬಹುದೆಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸೋಂಕು ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರದಿದ್ದರೂ ತ ಡೆಗಟ್ಟಬೇಕಾಗಿದೆ. ಸರ್ಕಾರ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಮುಂದಾಗಿದೆ.
ಪ್ರವಾಸಿ ತಾಣಗಳಲ್ಲಿ ಹೆಚ್ಚು ಜನರು ಗುಂಪುಗೂಡದಿರುವುದು, ಔತಣ ಪಾರ್ಟಿಗಳಿಗೆ ನಿರ್ಬಂಧ, ಹೊರ ರಾಜ್ಯದವರಿಂದ ಬರುವವರ ಮೇಲೆ ವಿಶೇಷ ನಿಗಾವಹಿಸುವುದು, 5ಕ್ಕಿಂತ ಹೆಚ್ಚು ಜನರು ಒಂದೇ ಕಡೆ ಸೇರಿದಂತೆ ನಿರ್ಬಂಧ ಹಾಕುವುದು, ಸಾಧ್ಯವಾದರೆ ಬೀಚ್ಗಳಲ್ಲಿ 6 ಗಂಟೆಯೊಳಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹಾಕಲಾಗುವುದು, ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ, ಕುಕ್ಕೆ, ಶೃಂಗೇರಿ, ಮಲೇಮಹದೇವಶ್ವರ, ಹೊರನಾಡು, ಘಾಟಿ ಸುಬ್ರಹ್ಮಣ್ಯ ಸೇರಿದಂತೆ ಮತ್ತಿತರ ಕಡೆ ಹೆಚ್ಚು ಜನರು ಸೇರಿದಂತೆ ಸರ್ಕಾರ ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ.
ಈಗಾಗಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಚರ್ಚೆ ನಡೆಸಿದ್ದಾರೆ. ದೇಶದಲ್ಲಿ 3ನೇ ಕೋವಿಡ್ ಅಲೆ ಬರಬಹುದೆಂದು ಈಗಾಗಲೇ ವಿಶ್ವಸಂಸ್ಥೆ ಸೇರಿದಂತೆ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಿರುವ ಐಸಿಯು, ಬೆಡ್ಗಳು, ಆಕ್ಸಿಜನ್, ಔಷಗಳು, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕೆಂದು ಸಲಹೆ ಮಾಡಿದ್ದಾರೆ.
ಎಲ್ಲ ಸಾಧಕಬಾಧಕಗಳ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಿರುವ ಸಿಎಂ, ರಾಜ್ಯದಲ್ಲಿ ಅನಿವಾರ್ಯವಾಗಿ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.

Articles You Might Like

Share This Article