ನಿವೃತ್ತ ಐಪಿಎಸ್ ಅಧಿಕಾರಿ ನಾರಾಯಣಗೌಡ ವಿಧಿವಶ

Social Share

ಬೆಂಗಳೂರು,ಜ.30- ನಿವೃತ್ತ ಐಪಿಎಸ್ ಅಧಿಕಾರಿ ಎಂ.ಸಿ.ನಾರಾಯಣ ಗೌಡ(69) ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಪುತ್ರರಾದ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಮತ್ತು ಎಂ.ಎನ್.ಅಭಿಷೇಕ್ ಹಾಗೂ ಪತ್ನಿ ಚಂದ್ರಮತಿ ನಾರಾಯಣ ಗೌಡ ಅವರನ್ನು ಅಗಲಿದ್ದಾರೆ. ಪಾರ್ಥೀವ ಶರೀರವನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ 12 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಅವರ ಹುಟ್ಟೂರಾದ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಮಸ್ತನಹಳ್ಳಿಗೆ ಕೊಂಡೊಯ್ದು ಇಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಬೆಂಗಳೂರಿನ ಅವರ ನಿವಾಸಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಕಂದಾಯ ಸಚಿವ ಆರ್.ಅಶೋಕ್, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಂಚಾರಿ ವಿಭಾಗದ ಜಂಟಿ ಆಯುಕ್ತರಾದ ರವಿಕಾಂತೇಗೌಡ, ಎಡಿಜಿಪಿ ಭಾಸ್ಕರ್‍ರಾವ್ ಸೇರಿದಂತೆ ಹಿರಿಯ ಐಪಿಎಸ್ , ಐಎಎಸ್ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ರಾಜಕೀಯ ಮುಖಂಡರು ವಿವಿಧ ಸಂಘಟನೆಗಳ ನಾಯಕರು ಅಂತಿಮ ದರ್ಶನ ಪಡೆದು ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಕೆಎಎಸ್ ಪರೀಕ್ಷೆ ತೇರ್ಗಡೆಯಾಗಿ ಕೆಎಸ್‍ಪಿಎಸ್ ಸೇರಿದರು. ನಂತರ ಐಪಿಎಸ್‍ಗೆ ಬಡ್ತಿ ಪಡೆದಿದ್ದ ನಾರಾಯಣ ಗೌಡ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಉತ್ತರವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅವರು, ಸಂಚಾರ ವಿಭಾಗದ ಡಿಸಿಪಿಯಾಗಿಯೂ ಸೇವೆ ಸಲ್ಲಿಸಿದ್ದರು. ಆಡಳಿತ ವಿಭಾಗದ ಡಿಸಿಪಿಯಾಗಿ ನಂತರ ಎಸ್‍ಪಿಯಿಂದ ಡಿಐಜಿ ಸ್ಥಾನಕ್ಕೆ ಬಡ್ತಿ ಪಡೆದ ನಂತರ ಅವರು ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು.
ನಂತರ ಐಜಿಪಿಯಾಗಿ ಬಡ್ತಿ ಪಡೆದು ಸೇವೆ ಸಲ್ಲಿಸಿ ಕಿಯೋನಿಕ್ಸ್‍ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಅವರು, ಜನಸೇವೆಯ ಒಲವು ಬೆಳೆಸಿಕೊಂಡು ರಾಜಕೀಯಕ್ಕೆ ಸೇರ್ಪಡೆಯಾಗಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಚಿಕ್ಕಪೇಟೆ ಕ್ಷೇತ್ರದಲ್ಲಿ ಸ್ರ್ಪಧಿಸಿ ಪರಾಭವಗೊಂಡಿದ್ದರು.
ನಿವೃತ್ತಿ ನಂತರವೂ ಕ್ರಿಯಾಶೀಲರಾಗಿದ್ದ ನಾರಾಯಣಗೌಡ ಅವರು ಹರ್ಷ ಇನ್‍ಸ್ಟಿಟ್ಯೂಟ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಪಾರ ಜನಾನುರಾಗಿಯಾಗಿದ್ದ ನಾರಾಯಣಗೌಡರು ಯಾವುದೇ ವಿಭಾಗದಲ್ಲಿ ಸೇವೆ ಸಲ್ಲಿಸಿದರೂ ಜನಮನ್ನಣೆ ಗಳಿಸುತ್ತಿದ್ದರು. ಇವರ ಕಚೇರಿಗಳಲ್ಲಿ ಜನಜಂಗುಳಿಯೇ ಇರುತ್ತಿತ್ತು.

Articles You Might Like

Share This Article