“ನಿವೃತ್ತ ಶಿಕ್ಷಕರು, ಉಪನ್ಯಾಸಕರಿಗೆ ಪಿಂಚಣಿ ಕೊಡಿ”

Social Share

xಬೆಂಗಳೂರು, ಫೆ.15- ಸುದೀರ್ಘ ಅವ ಸೇವೆ ಸಲ್ಲಿಸಿದ ಬಳಿಕ ನಿವೃತ್ತರಾಗುವ ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಪಿಂಚಣಿ ನೀಡುವ ನಿರ್ಧಾರ ಕೈಗೊಳ್ಳಿ ಎಂದು ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದರು.
ಪ್ರಶ್ನೋತ್ತರದ ಬಳಿಕ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, 2006ರ ಬಳಿಕ ನೇಮಕವಾದ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಹೊಸ ಪದ್ಧತಿಯ ಪ್ರಕಾರ ಪಿಂಚಣಿ ನೀಡಲು ಅವಕಾಶ ಇಲ್ಲ. ದಶಕಗಳ ಕಾಲ ಸೇವೆ ಸಲ್ಲಿಸಿದವರು ಬರಿ ಕೈನಲ್ಲಿ ಹೋಗುತ್ತಿರುವುದು ನೋಡಿದರೆ ಬೇಸರವಾಗುತ್ತಿದೆ.
ಬಹಳಷ್ಟು ರಾಜ್ಯಗಳಲ್ಲಿ ನಿಯಮ ಬದಲಾವಣೆಯಾಗಿದೆ. 2006ರ ನಂತರ ನೇಮಕವಾದವರಿಗೂ ಪಿಂಚಣಿ ನೀಡಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡಿವೆ. ಪಿಂಚಣಿ ಸೌಲಭ್ಯ ಇಲ್ಲದೆ ಬಹಳಷ್ಟು ಮಂದಿ ಜಿಗುಪ್ಸೆಗೆ ಒಳಗಾಗುತ್ತಿದ್ದಾರೆ ಎಂದು ಗಮನ ಸೆಳೆದರು.
ಅದಕ್ಕೆ ಉತ್ತರ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ಹೊಸ ಪಿಂಚಣಿ ವ್ಯವಸ್ಥೆ ಕರ್ನಾಟಕದಲ್ಲಿ ಮಾತ್ರವಲ್ಲ, ರಾಷ್ಟ್ರಾದ್ಯಂತ ಜಾರಿಗೆ ಬಂದಿದೆ. ಬೇರೆ ರಾಜ್ಯಗಳಲ್ಲಿ ಸರ್ಕಾರ ನಿಯಮ ಬದಲಾವಣೆ ಮಾಡಿರುವ ಪ್ರಕರಣಗಳಿದ್ದರೆ ಅದನ್ನು ಪರಿಶೀಲನೆ ಮಾಡಲಾಗುವುದು.
ಅವೇಶನದ ಬಳಿಕ ವಿಧಾನ ಪರಿಷತ್ ಸದಸ್ಯರ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನು ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು, ಇದು ಗಂಭೀರ ವಿಚಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಒಂದು ತೀರ್ಮಾನಕ್ಕೆ ಬನ್ನಿ ಎಂದು ಸಲಹೆ ನೀಡಿದರು. ಸಭೆ ನಡೆಸಲು ಪ್ರಯತ್ನಿಸುವುದಾಗಿ ಸಚಿವರು ಭರವಸೆ ನೀಡಿದರು.

Articles You Might Like

Share This Article