ಜಮೀನುಗಳ ಸರ್ವೇ ಶುಲ್ಕ ನೂರೈವತ್ತು ಪಟ್ಟು ಹೆಚ್ಚಳಕ್ಕೆ MLC  ದಿನೇಶ್ ಅಸಮಾಧಾನ

Social Share

ಬೆಂಗಳೂರು,ಫೆ.10- ಜಮೀನುಗಳ ಹದ್ದುಬಸ್ತಿಗೆ, ಭೂ ಸರ್ವೇಗೆ ಇದ್ದ ದರವನ್ನು ರಾಜ್ಯ ಸರ್ಕಾರ ನೂರೈವತ್ತು ಪಟ್ಟು ಹೆಚ್ಚಳ ಮಾಡಿರುವುದನ್ನು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕೃತಿ ವಿಕೋಪ, ಕರೋನಾ, ಬೆಳೆ ಏರಿಳಿತ, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ನಾನಾ ಕಾರಣಗಳಿಂದ ರೈತರ ಬದುಕು ಸಂಕಷ್ಟದಲ್ಲಿದೆ. ಇಂದಿಗೂ ನಮ್ಮ ರೈತರಿಗೆ ಸ್ಥಿರವಾದ ಬೆಲೆ ಎಂಬುದು ಸಿಗುತ್ತಿಲ್ಲ. ಸದಾ ಅನಿಶ್ಚಿತತೆಯಲ್ಲೇ ಬದುಕಬೇಕಾದ ಪರಿಸ್ಥಿತಿಯಲ್ಲಿ ರೈತರಿದ್ದಾರೆ. ಜನಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಹೊಸ ಆದೇಶ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಸರ್ವೇ ಶುಲ್ಕವನ್ನು ಬರೋಬ್ಬರಿ ನೂರು, ನೂರೈವತ್ತು ಪಟ್ಟು ಹೆಚ್ಚು ಮಾಡಿರುವುದು ನಿಜಕ್ಕೂ ಆತಂಕ ಸೃಷ್ಟಿಸಿದೆ ಎಂದಿದ್ದಾರೆ. ಜಮೀನು ಸರ್ವೇ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಹಲವು ಕಡೆ ಇನ್ನೂ ಹಕ್ಕು ಪತ್ರಗಳು ಸರಿಯಾಗಿ ಆಗಿರುವುದಿಲ್ಲ. ಎರಡು, ಮೂರು ತಲೆಮಾರುಗಳ ಜಮೀನುಗಳು ಸರಿಯಾದ ರೀತಿ ಸರ್ವೇ ಆಗದೆ ಭೂಮಿ ಮಕ್ಕಳ ಹೆಸರಿಗೆ ಆಗಿರುವುದಿಲ್ಲ. ಇದರಿಂದ ಅವರಿಗೆ ವ್ಯಾವಹಾರಿಕವಾಗಿಯೂ ಕೆಲವು ಸಮಸ್ಯೆಗಳು ತಲೆದೋರುತ್ತವೆ.
ಸರ್ಕಾರದ ಅನುದಾನಗಳು, ಯೋಜನೆಗಳು ಸರಿಯಾಗಿ ಸಿಗಬೇಕಾದಲ್ಲೂ ಹಕ್ಕುಪತ್ರಗಳು ಸಮರ್ಪಕವಾಗಿರಬೇಕು. ಅಲ್ಲದೆ, ಸರ್ವೇ ಮಾಡುವವರ ಸಂಖ್ಯಾ ಪ್ರಮಾಣವೂ ಕಡಿಮೆ ಇರುವುದರಿಂದ ಈಗಾಗಲೇ ಶುಲ್ಕ ಕಟ್ಟಿದವರಿಗೂ ನಿಧಾನ ಪ್ರಕ್ರಿಯೆಯಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ಈ ಪ್ರಕ್ರಿಯೆ ತ್ವರಿತ ಗತಿಯಲ್ಲಿ ಆಗಬೇಕಿದೆ. ಜೊತೆಗೆ ಅತಿಯಾದ ಶುಲ್ಕವನ್ನು ಹೇರಿರುವ ಆದೇಶವನ್ನು ವಾಪಸ್ ಪಡೆಯಬೇಕಿದೆ ಎಂದು ಆಗ್ರಹಿಸಿದ್ದಾರೆ.
ಇದುವರೆಗೆ 35 ರೂ.ಗಳಲ್ಲಿ ಆಗುತ್ತಿದ್ದ ಸರ್ವೇ ಕೆಲಸಕ್ಕೆ ಇನ್ನು ಮುಂದೆ 3,500 ರೂಪಾಯಿ, 4 ಸಾವಿರ ರೂ. ಕೊಡಬೇಕಿದೆ. ಇದು ಗ್ರಾಮೀಣ ಪ್ರದೇಶದ ಜನರಿಗೆ ದೊಡ್ಡ ಹೊರೆಯಾಗಿದೆ. ಇದು ಸರಿಯಾದ ಕ್ರಮವಲ್ಲ. ಈಗಾಗಲೇ ಕೊರೋನಾದಂತಹ ಸಂಕಷ್ಟದ ಕಾಲದಲ್ಲಿ ರೈತರು ಹಲಾವರು ಸಂಕಷ್ಟಗಳಿಗೆ ಸಿಲುಕಿದ್ದಾರೆ. ಇದನ್ನು ಸರ್ಕಾರ ಅರಿತುಕೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.

Articles You Might Like

Share This Article