ಬೆಂಗಳೂರು,ಮಾ.7-ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಯನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾಸಭೆಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಸಂಗಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಭದ್ರಾವತಿ ತಾಲ್ಲೂಕಿನಲ್ಲಿ ಖಾಲಿ ಇರುವ ಕೆಲವು ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಸರ್ಕಾರ ಕಾರ್ಯೋನ್ಮುಖವಾಗಿದೆ. ಯಾವ ಯಾವ ಹುದ್ದೆಗಳು ಖಾಲಿ ಇವೆಯೋ ಅವುಗಳನ್ನು ಭರ್ತಿ ಮಾಡಿಕೊಳ್ಳಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಭದ್ರಾವತಿಗೆ ತಹಸೀಲ್ದಾರ್ ಗ್ರೇಡ್-1 ಒಂದು, ತಹಸೀಲ್ದಾರ್ ಗ್ರೇಡ್-2 ಒಂದು, ಶಿರಸ್ತೇದಾರ್ 7, ಪ್ರಥಮ ದರ್ಜೆ ಸಹಾಯಕರು/ಕಂದಾಯ ನಿರೀಕ್ಷಕರ 9 ಹುದ್ದೆಗಳಲ್ಲಿ 6, ದ್ವಿತೀಯ ದರ್ಜೆ ಸಹಾಯಕರಲ್ಲಿ 11ರಲ್ಲಿ 10 ಭರ್ತಿ, ಗ್ರಾಮಲೆಕ್ಕರಲ್ಲಿ 47ರಲ್ಲಿ 34 ಹುದ್ದೆಗಳು ಭರ್ತಿಯಾಗಿವೆ.
ವಾಹನ ಚಾಲಕರು-1, ಬೆರಳಚ್ಚು ಗಾರರು 3, ಗ್ರೂಪ್ ಡಿ 13 ಸೇರಿದಂತೆ ಇಲ್ಲಿ 24 ಹುದ್ದೆಗಳು ಖಾಲಿ ಇವೆ. ಈಗಾಗಲೇ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೌನ್ಸಿಲ್ ಕೂಡ ನಡೆದಿದೆ. ಉಳಿದಿರುವ ಖಾಲಿ ಇರುವ ಇತರೆ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುವುದು ಎಂದರು.
