ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಕ್ರಾಂತಿ ಮಾಡಿದೆ : ಸಚಿವ ನಾಗೇಶ್

Social Share

ಬೆಂಗಳೂರು, ಜು.19- ವಾಜಪೇಯಿ ಆಡಳಿತ ಅವಧಿಯಿಂದ ಇಲ್ಲಿಯವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಕ್ರಾಂತಿ ಮಾಡಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಂದು ತಿಳಿಸಿದರು. ಬೆಂಗಳೂರು ಪ್ರೆಸ್‍ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವ ಶಿಕ್ಷಣ ಅಭಿಯಾನದ ಮೂಲಕ ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾಗಳು ಹೆಚ್ಚು ಒತ್ತು ಕೊಡುವ ಮೂಲಕ ಅಭಿವೃದ್ಧಿಯನ್ನು ಸಾಧಿಸಿವೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ನಂತರ ಬಂದ ಸುರೇಶ್ ಕುಮಾರ್ ಅನೇಕ ಸಕಾರಾತ್ಮಕ ಮತ್ತ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಂದರು. ನಾನು ಸಚಿವನಾದ ಮೇಲೆ ಕೊರೊನಾ ಕಾರಣದಿಂದಾಗಿ ದೊಡ್ಡ ಸವಾಲು ಎದುರಿಸಬೇಕಾಯಿತು. ಆದರೂ ನಾನು ಗುಣಮಟ್ಟದ ಶಿಕ್ಷಣ, ಶಿಕ್ಷಕರ ಕೊರತೆ,ಇವೆಲ್ಲದರ ಬಗ್ಗೆ ಹೆಚ್ಚು ಗಮನ ಕೊಟ್ಟು 15 ಸಾವಿರ ಶಿಕ್ಷಕರ ನೇಮಕಾತಿ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಆಯ್ಕೆಯಾದ ಶಿಕ್ಷಕರನ್ನು ಹಳ್ಳಿಗಾಡಿನ ಶಾಲೆಗಳಿಗೆ ನಿಯೋಜಿಸುವ ಕಾರ್ಯ ಆಗುತ್ತದೆ ಎಂದರು.

ಸುಮಾರು ವರ್ಷಗಳಿಂದ ಪಿಟಿ ಶಿಕ್ಷಕರ ಆಯ್ಕೆ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಪ್ರಮೋಷನ್ ವ್ಯವಸ್ಥೆ ನಿಂತಿದ್ದು, ಅದನ್ನು ಈ ವರ್ಷದಿಂದ ಜಾರಿ ಮಾಡಲು ನಿರ್ಧರಿಸಿದ್ದೇವೆ. 35,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಶಾಲೆಯ ಪ್ರಾರಂಭದಲ್ಲಿ ಬೋಧನೆಗೆ ವ್ಯವಸ್ಥೆ ಮಾಡಲಾಗಿದೆ ಮತ್ತು ಅವರಿಗೆ ಗೌರವ ಧನವನ್ನು 2500 ಮತ್ತು ಪದವಿ ಪೂರ್ವ ಶಿಕ್ಷಕರಿಗೆ 3000 ಗೌರವಧನವನ್ನು ಹೆಚ್ಚಿಸಲಾಗಿದೆ ಎಂದರು.

ಶಿಕ್ಷಕರ ಬಹು ವರ್ಷಗಳ ಬೇಡಿಕೆ ವರ್ಗಾವಣೆ ಸಮಸ್ಯೆಯನ್ನು ಬಗೆಹರಿಸಲು 24,000 ಶಿಕ್ಷಕರ ಕೌನ್ಸಿಲಿಂಗ್ ಕಾರ್ಯ ಮುಗಿಸಿ ಅವರಿಗೆ ಕಾರ್ಯನಿಯೋಜನೆ ಮಾಡುವ ವ್ಯವಸ್ಥೆ ಮಾಡಲಾಗಿದೆ. 48,000 ಶಾಲೆಗಳಿವೆ. ಅವುಗಳಲ್ಲಿ 13,800 ಶಾಲೆಗಳಲ್ಲಿ 25 ಮಕ್ಕಳಿಗಿಂತ ಕಡಿಮೆ ಮಕ್ಕಳಿದ್ದಾರೆ.

ಇವುಗಳನ್ನು ಸರಿಯಾದ ಅನುಪಾತ ಕ್ರಮದಲ್ಲಿ ಸರಿದೂಗಿಸಲು ವ್ಯವಸ್ಥೆ ಕೈಗೊಂಡಿದ್ದೇವೆ. ಪ್ರಸ್ತುತ ಸಮಾಜದಲ್ಲಿ ಇಂಗ್ಲಿಷ್ ಭಾಷೆಗೆ ಪೋಷಕರು ಹೆಚ್ಚಿನ ಆದ್ಯತೆ ಕೊಡುತ್ತಿರುವುದರಿಂದ ಪ್ರತಿ ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ತೆರೆದು ಇಂಗ್ಲೀಷ್ ಶಿಕ್ಷಕರಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಬೋಧಿಸುವ ಕಾರ್ಯ ಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಬಾಲ್ಯದಿಂದಲೇ ಮಕ್ಕಳು ನೈತಿಕ ಅಂಶಗಳನ್ನು ಮೈಗೂಡಿಸಿಕೊಳ್ಳಲು ಅವರಿಗೆ ನೈತಿಕ ಶಿಕ್ಷಣವನ್ನ ಬೋಧಿಸುವ ವ್ಯವಸ್ಥೆ ಮಾಡಲಿದ್ದೇವೆ ಮತ್ತು ಶಾಸಕರ ಅನುದಾನದಿಂದ ಮಕ್ಕಳು ಶಾಲೆಗೆ ಹೋಗಲು ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಲು ಯೋಜನೆ ರೂಪಿಸಿದ್ದೇವೆ ಎಂದು ತಮ್ಮ ಹೊಸ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.

ಪಠ್ಯಪುಸ್ತಕ ಪರಿಷ್ಕಣೆ ವಿಚಾರವಾಗಿ ಬಂದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಈ ವಿಚಾರದ ಬಗ್ಗೆ ತುಂಬಾ ಮಾತನಾಡಿದ್ದೇನೆ. 2017ರಲ್ಲಿ ಎನ್‍ಸಿಎಆರ್‍ಟಿ ಕೊಟ್ಟ ವರದಿಯಲ್ಲಿ ಏನಿದೆ ಎಂದು ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಶ್ರೀಧರ್ ಮತ್ತು ಮಾಧ್ಯಮ ಕಾರ್ಯದರ್ಶಿ ಮಲ್ಲಪ್ಪ ಉಪಸ್ಥಿತರಿದ್ದರು.

Articles You Might Like

Share This Article