ರೇವಾ, ಫೆ.8- ಮಧ್ಯಪ್ರದೇಶದ ರೇವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ವ್ಯಕ್ತಿ ಮತ್ತು ಇಬ್ಬರು ಅಪ್ರಾಪ್ತ ಹುಡುಗರು 17 ವರ್ಷದ ಬುಡಕಟ್ಟು ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ್ದು, ಆಕೆಯ ಮುಖವನ್ನು ಹಲ್ಲುಗಳಿಂದ ಬಲವಾಗಿ ಕಚ್ಚಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ವರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಾಲಕಿ ತನ್ನ ಸೋದರಸಂಬಂಧಿಯೊಂದಿಗೆ ಜಾತ್ರೆಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ ಮೂವರು ಆರೋಪಿಗಳು ಆಕೆಯನ್ನು ಅಪಹರಿಸಿ ನಿರ್ಜನ ಅರಣ್ಯಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳು ಬಾಲಕಿಯ ಮುಖವನ್ನು ಕಚ್ಚಿ, ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಎಚ್ಚರಿಕೆ ನೀಡಿದ್ದಾರೆ. ಸಂತ್ರಸ್ತೆ ಹರ ಸಾಹಸ ಪಟ್ಟು ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಂಡು ಭಾನುವಾರ ಮಧ್ಯರಾತ್ರಿಯ ಸಂಬಂಧಿಕರ ಸ್ಥಳಕ್ಕೆ ತಲುಪಿದ್ದಾರೆ.
ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಪ್ರಮುಖ ಆರೋಪಿಗೆ 22 ವರ್ಷ, ಉಳಿದ ಇಬ್ಬರ ವಯಸ್ಸು 16 ಮತ್ತು 17 ವರ್ಷಗಳೆಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯನ್ನಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಪರಾಧವನ್ನು ದೃಢಪಡಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೂವರು ಆರೋಪಿಗಳು ಮತ್ತು ಸಂತ್ರಸ್ತೆ ಒಂದೇ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಘಟನೆಯ ನಂತರ, ಹುಡುಗಿಯ ಕುಟುಂಬವು ಸಂತ್ರಸ್ತೆಯನ್ನು ಮದುವೆಯಾಗಲು ಪ್ರಮುಖ ಆರೋಪಿಯನ್ನು ಕೇಳಿಕೊಂಡಿತು, ಆದರೆ ಆತ ನಿರಾಕರಿಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
