ರಿಯಾಗೆ ಭಾರೀ ಸಂಕಷ್ಟ : ಎನ್‍ಸಿಬಿ, ಸಿಬಿಐ, ಇಡಿ ಇಕ್ಕಳದಲ್ಲಿ ಸುಶಾಂತ್ ಗೆಳತಿ

ಮುಂಬೈ, ಸೆ.5- ಬಾಲಿವುಡ್ ಖ್ಯಾತ ನಟ ಸುಶಾಂತ್‍ಸಿಂಗ್ ರಜಪೂತ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡಿರುವ ನಟಿ ಮತ್ತು ಗೆಳತಿ ರಿಯಾ ಚಕ್ರವರ್ತಿಗೆ ಒಂದಾದ ಮೇಲೆ ಒಂದರಂತೆ ಸರಣಿ ಸಂಕಷ್ಟಗಳು ಎದುರಾಗಿವೆ.

ಸುಶಾಂತ್ ಆತ್ಮಹತ್ಯೆಗೆ ಪ್ರಚೋದನೆ ಮತ್ತು 15 ಕೋಟಿ ರೂ.ಗಳಿಗೂ ಹೆಚ್ಚು ಹಣ ವಂಚಿಸಿರುವ ಪ್ರಕರಣಗಳಲ್ಲಿ ಈಗಾಗಲೇ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ತನಿಖಾ ಸಂಸ್ಥೆಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರಿಯಾ ಈಗ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ)ಯಿಂದಲೂ ತೀವ್ರ ತನಿಖೆ ಎದುರಿಸುವಂತಾಗಿದೆ.

ಈಗಾಗಲೇ ಬಂಧನಕ್ಕೊಳಗಾಗಿ ವಿಚಾರಣೆಯಲ್ಲಿರುವ ರಿಯಾ ಸಹೋದರ ಸೌವಿಕ್ ಚಕ್ರವರ್ತಿ ತನ್ನ ಅಕ್ಕನ ಸೂಚನೆ ಮೇರೆಗೆ ಸುಶಾಂತ್‍ಸಿಂಗ್‍ಗೆ ಮಾದಕ ವಸ್ತು ನೀಡುತ್ತಿದ್ದೆ ಎಂದು ಎನ್‍ಸಿಬಿ ಮುಂದೆ ಹೇಳಿಕೆ ನೀಡಿದ ನಂತರ ಬಾಲಿವುಡ್ ನಟಿಗೆ ಭಾರೀ ಸಂಕಷ್ಟ ಎದುರಾಗಿದೆ.

ಎನ್‍ಸಿಬಿ ರಿಯಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಮತ್ತಷ್ಟು ಮಾಹಿತಿ ಸಂಗ್ರಹಿಸಲು ಸಜ್ಜಾಗಿದೆ. ಇದರೊಂದಿಗೆ ಸುಶಾಂತ್ ಪ್ರೇಯಸಿ ಈಗ ಸಿಬಿಐ, ಇಡಿ ಮತ್ತು ಎನ್‍ಸಿಬಿ ತನಿಖೆಯ ಇಕ್ಕಳದಲ್ಲಿ ಸಿಲುಕಿ ಒದ್ದಾಡುವಂತಾಗಿದೆ.

ಈ ಮಧ್ಯೆ ಸೌವಿಕ್ ಮತ್ತು ಸುಶಾಂತ್ ಫ್ಲಾಟ್‍ನ ಅಡುಗೆ ಭಟ್ಟ ಸ್ಯಾಮ್ಯುಯಲ್ ಮೆರಿಂಡಾ ಅವರನ್ನು ಇಂದು ಎನ್‍ಸಿಬಿ ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದು, ಬಾಲಿವುಡ್‍ನ ಡ್ರಗ್ಸ್ ಜಾಲದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.