ಬೆಂಗಳೂರು,ಫೆ.5- ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಹಣ ಪಡೆದು ಮೋಸ ಮಾಡಿದ್ದ ಇಬ್ಬರು ವಂಚಕರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿ 15 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ. ನಾಗರಬಾವಿಯ ವಿಘ್ನೇಶ್ (37) ಮತ್ತು ಕೊಲಾರ ಜಿಲ್ಲೆಯ ಮುಳಬಾಗಿಲಿನ ನಾಗರಾಜು (45) ಬಂಧಿತರು.
ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನೀತನ್‍ರಾಜ್ ಮತ್ತು ಅವರ ಸ್ನೇಹಿತ ಗೋಪಿ ಕಾರ್ತಿಕ್ ನಿಂತಿದ್ದಾಗ ಸುರೇಶ್ ಎಂಬುವರು ಇವರ ಬಳಿ ಬಂದು ರೈಸ್‍ಪುಲ್ಲಿಂಗ್ ಹೆಸರಿನಲ್ಲಿ ಗಮನ ಸೆಳೆದಿದ್ದಾರೆ. ಸಿಡಿಲು ಬಡಿದ ಅದೃಷ್ಟದ ಒಂದು ಚೆಂಬು ತೋರಿಸಿ ಈ ಚೆಂಬುವಿನಲ್ಲಿ ಐಸೋಟೋಪ ರೇಡಿಯೇಷನ್ ಇದ್ದು, ಇದು ಅಮೆರಿಕಾದ ನಾಸಾ, ಜಪಾನಿನ ಜಾಕ್ಸ್ ಕಂಪೆನಿಯವರಿಗೆ ಮಾರಾಟ ಮಾಡುತ್ತಿದ್ದು, ಈ ಪ್ರಾಜೆಕ್ಟ್ ನಲ್ಲಿ ಒಂದು ಕೋಟಿ ಹಣ ಹೂಡಿಕೆ ಮಾಡಿದ್ದಲ್ಲಿ ಐದರಷ್ಟು ಅಂದರೆ 5 ಕೋಟಿ ಹಣ ನೀಡುತ್ತಾರೆಂದು ತಿಳಿಸಿದ್ದಾರೆ.
ನಂತರ ನೀತನ್‍ರಾಜ್ ಮತ್ತು ಗೋಪಿಕಾರ್ತಿಕ್‍ರಿಂದ ಒಟ್ಟು 78.89 ಲಕ್ಷ ರೂ. ಪಡೆದುಕೊಂಡು ಮೋಸ ಮಾಡಿ ಪರಾರಿಯಾಗಿರುವ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಸಂಜೀವ ಎಸ್ ಪಾಟೀಲ್ ಹಾಗೂ ಸಹಾಯಕ ಪೊಲೀಸ್ ಆಯುಕ್ತ ಕೋದಂಡರಾಮ್ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಶಂಕರ್‍ನಾಯಕ್, ಪಿಎಸ್‍ಐ ಸಂಜೀವ್, ಎಎಸ್‍ಐಗಳಾದ ರಮೇಶ್, ರಘು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಆರೋಪಿಗಳ ಪತ್ತೆಕಾರ್ಯ ಕೈಗೊಂಡಿದ್ದರು.
ರೈಸ್‍ಪುಲ್ಲಿಂಗ್ ಹೆಸರಿನಲ್ಲಿ ಅಮಾಯಕರನ್ನು ವಂಚಿಸುತ್ತಿದ್ದವರ ಬಗ್ಗೆ ಮಾಹಿತಿ ಕಲೆಹಾಕಿ ಪ್ರಮುಖ ಆರೋಪಿ ವಿಘ್ನೇಶ್ ಮತ್ತು ನಾಗರಾಜನನ್ನು ಬಂಸಿ 15 ಲಕ್ಷ ಹಣ ವಶಪಡಿಸಿಕೊಂಡು, ತಲೆ ಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಕಾರ್ಯ ಮುಂದುವರೆಸಿದ್ದಾರೆ.
