ಲಂಡನ್, ಆ.19- ಪಕ್ಷದ ಮತದಾರರ ಸಮೀಕ್ಷೆಗಳು ತಮ್ಮ ಪ್ರತಿಸ್ರ್ಪಧಿ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್‍ಗೆ ದೃಢವಾದ ಮುನ್ನಡೆ ನೀಡುತ್ತಿರುವಾಗಲೂ, ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಅಭಿಯಾನದಲ್ಲಿ ಮುಂದುವರಿಯಲು ಬಯಸುವುದಗಿ ಬ್ರಿಟಿಷ್ ಪ್ರಧಾನಿ ಹುದ್ದೆಯ ಆಕಾಂಕ್ಷಿ ರಿಷಿ ಸುನಕ್ ಹೇಳಿದ್ದಾರೆ.
ಖಾಸಗಿ ಚಾನೆಲ್ ಐಟಿವಿಯ ದಿಸ್ ಮಾರ್ನಿಂಗ್ ಕಾರ್ಯಕ್ರಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಭಾರತೀಯ ಮೂಲದ ಮಾಜಿ ಚಾನ್ಸಲರ್ ರಿಷಿ ಸುನಕ್, ತಮ್ಮ ಪ್ರತಿಸ್ರ್ಪಧಿ ಲಿಜ್ ಟ್ರಸ್ ಅವರು ನೀಡುತ್ತಿರುವ ತ್ವರಿತ ತೆರಿಗೆ ಕಡಿತ ಯೋಜನೆಗಳು ಹಣದುಬ್ಬರವನ್ನು ಹೆಚ್ಚಿಸುತ್ತವೆ. ಇದನ್ನು ಅರ್ಥ ಮಾಡಿಕೊಂಡ ಜನ ಖಂಡಿತವಾಗಿ ನನ್ನ ಗೆಲುವಿಗೆ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ನಾನು ಸ್ಪರ್ಧೆಯಲ್ಲಿ ಮುಂದುವರಿಯಲು ಉತ್ಸುಕನಾಗಿದ್ದೇನೆ, ನನ್ನ ಆಲೋಚನೆಗಳು ಸರಿಯಾಗಿವೆ. ನಾನು ಗೆಲುವಿಗಾಗಿ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ನನ್ನ ಮಾತುಗಳು ಕೆಲವರಿಗೆ ಒಪ್ಪಲು ಮತ್ತು ನಂಬಲು ಕಷ್ಟವಾಗುತ್ತಿದೆ. ಆದರೆ ಅವು ಸತ್ಯವಾಗಿವೆ ಎಂದಿದ್ದಾರೆ.
ದೇಶದ ಪರಿಸ್ಥಿತಿಯನ್ನು ಅನುಸರಿಸಿ ವಾಸ್ತವವನ್ನು ನಾನು ಹೇಳುತ್ತಿದ್ದೇನೆ. ಸಮೀಕ್ಷೆಯಲ್ಲಿ ಹಿನ್ನೆಡೆಯಾಗಿದೆ ಎಂಬ ಕಾರಣಕ್ಕೆ ಜನರನ್ನು ನಂಬಿಸಲು ನಾನು ಯತ್ನಿಸುವುದಿಲ್ಲ. ಪ್ರಾಮಾಣಿಕವಾಗಿಯೇ ಮಾತನಾಡುತ್ತೇನೆ ಎಂದು ಸುನಕ್ ಸ್ಪಷ್ಟ ಪಡಿಸಿದ್ದಾರೆ.
ಸ್ಕೈ ನ್ಯೂಸ್ ನಡೆಸಿದ ಯುಗೋ ಮತ ಸಮೀಕ್ಷೆಯಲ್ಲೂ ಲಿಜ್ ಟ್ರಸ್ ದೃಢವಾದ 32 ಅಂಕಗಳ ಮುನ್ನೆಡೆ ಕಾಯ್ದುಕೊಂಡಿದ್ದಾರೆ. ಇತರ ಸಮೀಕ್ಷೆಗಳು ಮತ ಚಲಾಯಿಸುವ ಟೋರಿ ಸದಸ್ಯರು ಟ್ರಸ್ ಪರವಾಗಿ ಇರುವ ಮುನ್ಸೂಚನೆ ನೀಡಿವೆ.
ಐಟಿವಿಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಹಿಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸಂಪುಟದ ಸದಸ್ಯರೊಬ್ಬರು ಕೊಂಚ ಬೆಸ ಸಂಖ್ಯೆ ಇರುವುದನ್ನು ಒಪ್ಪಿಕೊಂಡರು. ಈ ಹಿಂದೆ ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ಹಲವು ಭ್ರಷ್ಟಚಾರಗಳು, ಅವರ ಸಂಪುಟದ ಸದಸ್ಯರ ಹಗರಣಗಳಿಂದ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಹಣಕಾಸು ಸಚಿವರಾಗಿದ್ದ ರಿಷಿ ಸುನಕ್‍ರ ರಾಜೀನಾಮೆ ಸರ್ಕಾರದ ಅಸ್ತಿತ್ವಕ್ಕೆ ಭಾರೀ ಪೆಟ್ಟು ಬಿದ್ದಿತ್ತು.
60 ಸದಸ್ಯರ ಸಂಪುಟದ ಸರ್ಕಾರದಲ್ಲಿ ಹಂತ ಹಂತವಾಗಿ ರಾಜೀನಾಮೆ ಪರ್ವ ಆರಂಭವಾಯಿತು. ಕೊನೆಗೆ ಜಾನ್ಸನ್ ತಮ್ಮ ರಾಜೀನಾಮೆ ನೀಡಿದ್ದರು ಮತ್ತು ಮುಂದೆ ಪಕ್ಷದ ನಾಯಕತ್ವ ಸ್ಪರ್ಧೆಯಲ್ಲಿ ಉಳಿಯಲು ಬಯಸುವುದಿಲ್ಲ ಎಂದು ಘೋಷಿಸಿದರು.
ಬಳಿಕ ರಿಷಿ ಸುನಕ್ ಪ್ರಧಾನಿ ಹುದ್ದೆಯ ಪ್ರಬಲ ಸ್ರ್ಪಯಾಗಿ ಹೊರ ಹೊಮ್ಮಿದರು. ಆದರೆ ಲಿಜ್ ಟ್ರಸ್ ಪೈಪೋಟಿ ನೀಡುತ್ತಿದ್ದು, ನಾಯಕತ್ವ ಸರ್ಧೆಯಲ್ಲಿ ರಿಷಿಗೆ ಸವಾಲೊಡ್ಡಿದ್ದಾರೆ. ಆದರೂ ವಿಶ್ವಾಸ ಕಳೆದುಕೊಳ್ಳದ ರಿಷಿ ಸ್ಪರ್ಧೆಯಲ್ಲಿ ಮುಂದುವರೆದಿದ್ದಾರೆ.