ಮಳೆಯಿಂದ ಹಾಳಾದ ರಸ್ತೆಗಳು ದುರಸ್ತಿಗೆ ತಕ್ಷಣವೇ ಕಾಮಗಾರಿ : ಸಿ.ಸಿ.ಪಾಟೀಲ್

Social Share

ಬೆಂಗಳೂರು,ಸೆ.20- ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ರಸ್ತೆಗಳು ಹಾಳಾಗಿವೆ. ಮಳೆ ನಿಂತ ತಕ್ಷಣವೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರ ಪರವಾಗಿ ಶಾಸಕ ಲಿಂಗೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಎರಡುಮೂರು ವರ್ಷಗಳಿಂದ ನಿರಂತರವಾಗಿ ಮಳೆಯಾಗುತ್ತಲೇ ಇರುವುದರಿಂದ ರಸ್ತೆಗಳು ವ್ಯಾಪಕವಾಗಿ ಹಾಳಾಗಿವೆ. ಮಳೆ ಬಂದ ಸಂದರ್ಭದಲ್ಲಿ ದುರಸ್ತಿ ಕಾರ್ಯ ಸಾಧ್ಯವಿಲ್ಲ. ಮಳೆ ನಿಂತ ತಕ್ಷಣ ಆದ್ಯತೆ ಮೇರೆಗೆ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದರು.

ಇದನ್ನೂ ಓದಿ : ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಇಲ್ಲ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕೋಪಯೋಗಿ ಇಲಾಖೆಗೆ ರಸ್ತೆಗಳ ಅಭಿವೃದ್ದಿಗಾಗಿ 300 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಆದ್ಯತೆ ಮೇರೆಗೆ ತೆಗೆದುಕೊಳ್ಳುತ್ತೇವೆ. ಪ್ರಸ್ತುತ ಮಳೆ ನಿಂತಿರುವುದರಿಂದ ಕಾಮಗಾರಿ ಆರಂಭಿಸಲಾಗುವುದು ಎಂದರು.

ಹಾಸನದಲ್ಲಿ ಕಳೆದ ಎರಡುಮೂರು ತಿಂಗಳಿನಿಂದ ಸುರಿದ ಮಳೆಯಿಂದಾಗಿ ಒಟ್ಟು 999 ರಸ್ತೆ ಹಾಗೂ 2290.73 ಕಿ.ಮೀ , 7861.90 ಲಕ್ಷ ನಷ್ಟವಾಗಿದೆ ಎಂದು ಅಂಕಿಸಂಖ್ಯೆಗಳ ವಿವರ ನೀಡಿದರು.
300 ಕೋಟಿ ಅನುದಾನ ಲಭ್ಯವಾಗಿರುವುದರಿಂದ ಎಲ್ಲ ಜಿಲ್ಲೆಗಳಿಂದ ವಿಸ್ತೃತ ವರದಿ ಬಂದ ಮೇಲೆ ಕಾಮಗಾರಿ ಮಾಡುತ್ತೇವೆ ಎಂದು ತಿಳಿಸಿದರು.

Articles You Might Like

Share This Article