ಮೋಜಿನ ಜೀವನಕ್ಕಾಗಿ ಕದಿಯುತ್ತಿದ್ದ ಅಂತಾರಾಜ್ಯ ಕಳ್ಳರ ಸೆರೆ

ಬೆಂಗಳೂರು,ಡಿ.27- ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡು ಸಹಚರರೊಂದಿಗೆ ಸೇರಿ ಕನ್ನಗಳವು ಮಾಡಿ ಮೋಜಿನ ಜೀವನಕ್ಕೆ ಹಾಗೂ ದುಶ್ಚಟಗಳಿಗೆ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶೇಖ್ ಇಲಿಯಾಸ್ ಅಲಿಯಾಸ್ ಇಲ್ಲು(34) ಮತ್ತು ಎರಕಲ ಕಾವಡಿ ನಾಗೇಂದ್ರ ಅಲಿಯಾಸ್ ನಾಗ(35) ಬಂಧಿತರು.

ಆರೋಪಿಗಳಿಂದ 35 ಲಕ್ಷ ರೂ. ಬೆಲೆ ಬಾಳುವ 650 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಒಟ್ಟು ಆರು ಕನ್ನಗಳವು ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಈ ಇಬ್ಬರು ಇತರೆ ಆರೋಪಿಗಳೊಂದಿಗೆ ಸೇರಿ ನಗರದಲ್ಲಿ ಕಳ್ಳತನ ಮಾಡಿದ್ದು, ಇದುವರೆಗೂ ಯಾವ ಪೊಲೀಸ್ ಠಾಣೆಯಲ್ಲೂ ಸಹ ಸಿಕ್ಕಿ ಹಾಕಿಕೊಳ್ಳದೆ ತಲೆಮರೆಸಿಕೊಂಡು ಕಳವು ಮಾಡುವುದನ್ನು ಮುಂದುವರೆಸಿದ್ದರು.

ಆರೋಪಿ ಶೇಖ್ ಇಲಿಯಾಸ್ 2008ರಿಂದ ಆಂಧ್ರಪ್ರದೇಶ, ಅನಂತಪುರ ಜಿಲ್ಲೆ, ಹಿಂದೂಪರ, ಕರ್ನಾಟಕದ ಗೌರಿಬಿದನೂರು, ಮಾಗಡಿರಸ್ತೆಯ ತಾವರೆಕೆರೆ ಪೊಲೀಸ್ ಠಾಣೆ ಹಾಗೂ ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ತನ್ನ ಸಹಚರರೊಂದಿಗೆ ಸೇರಿಕೊಂಡು ಹಲವಾರು ಮನೆಗಳಲ್ಲಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಸಹ ಕಳ್ಳತನವನ್ನೇ ತನ್ನ ವೃತ್ತಿಯಾಗಿಸಿಕೊಂಡಿದ್ದನು.

ಮತ್ತೊಬ್ಬ ಆರೋಪಿ ಯರಕಲಕಾವಡಿ ನಾಗೇಂದ್ರ 2007ರಿಂದ ಆಂಧ್ರಪ್ರದೇಶ, ಅನಂತಪುರ ಜಿಲ್ಲೆ, ಹಿಂದೂಪರ, ಕರ್ನಾಟಕದ ಗೌರಿಬಿದನೂರು, ತುಮಕೂರಿನ ಮಧುಗಿರಿ, ಕೊರಟಗೆರೆ ಹಾಗೂ ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಸಹಚರರೊಂದಿಗೆ ಸೇರಿಕೊಂಡು ಹಲವಾರು ಮನೆಗಳಲ್ಲಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಸಹ ಕಳ್ಳತನವನ್ನೇ ತನ್ನ ವೃತ್ತಿಯಾಗಿಸಿಕೊಂಡಿದ್ದಾನೆ.

ಈ ಕಾರ್ಯಾಚರಣೆಯನ್ನು ಡಿಸಿಪಿ ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ನಾಗರಾಜ್ ಅವರ ನೇತೃತ್ವದಲ್ಲಿ ಸಿಸಿಬಿ ಇನ್‍ಸ್ಪೆಕ್ಟರ್ ಹಜರೇಶ್ ಕಿಲ್ಲೆದಾರ್ ಮತ್ತು ಅವರ ಸಿಬ್ಬಂದಿ ತಂಡ ಸತತ ಪ್ರಯತ್ನ ನಡೆಸಿ ಆರೋಪಿಗಳನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳ ಬಂಧನದಿಂದ ಹೆಣ್ಣೂರು ಪೊಲೀಸ್ ಠಾಣೆ, ಜೆಪಿನಗರ, ಹೆಬ್ಬಾಳ, ಡಿಜೆಹಳ್ಳಿ, ಕೆ.ಆರ್.ಪುರ ಮತ್ತು ಆಡುಗೋಡಿ ಪೊಲೀಸ್ ಠಾಣೆಯ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 6 ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ.