ಬೆಂಗಳೂರು,ಜ.28-ಆದಾಯ ತೆರಿಗೆ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಮನೆಗೆ ನುಗ್ಗಿ ಹಣ ಹಾಗೂ ಪಿಸ್ತೂಲ್‍ನ್ನು ದರೋಡೆ ಮಾಡಿದ್ದ ಐದು ಮಂದಿ ದರೋಡೆಕೋರರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿ 1.7 ಲಕ್ಷ ನಗದು ಹಾಗೂ ಎರಡು ಪಿಸ್ತೂಲ್ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಜ.23ರಂದು ಬೆಳಗ್ಗೆ 8.45ರ ಸುಮಾರಿಗೆ ಅಪರಿಚಿತರು ಮನೆಯೊಂದರ ಬಳಿ ಹೋಗಿ ಆದಾಯ ತೆರಿಗೆ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ.
ಮನೆಯನ್ನು ಪರಿಶೀಲಿಸಬೇಕೆಂದು ಹೇಳಿ ಮನೆಯ ವಾರ್ಡ್‍ರೂಬ್‍ನಲ್ಲಿಟ್ಟಿದ್ದ ದಾಖಲಾತಿಗಳನ್ನು ನೋಡಿದ್ದಾರೆ. ನಂತರ ವಾರ್ಡ್‍ರೂಬ್ ಲಾಕರ್‍ನಲ್ಲಿಟ್ಟಿದ್ದಂತಹ 3.5 ಲಕ್ಷ ರೂ. ಹಾಗೂ ಒಂದು ಪಿಸ್ತೂಲ್‍ನ್ನು ತೆಗೆದುಕೊಂಡು ಹೋಗಿದ್ದಾರೆ.
ಈ ಬಗ್ಗೆ ಅನುಮಾನಗೊಂಡ ಮನೆ ಮಾಲೀಕ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿ, ತಮ್ಮ ತಂದೆಯವರು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ನಮ್ಮ ತಂದೆ ಮೃತರಾದ್ದರಿಂದ ಅವರ ಕಚೇರಿಯಲ್ಲಿದ್ದ ಕೆಲವು ದಾಖಲೆಗಳು ಹಾಗೂ ತಂದೆಯ ಹೆಸರಿನಲ್ಲಿದ್ದ ಪಿಸ್ತೂಲ್‍ನ್ನು ತೆಗೆದುಕೊಂಡು ಮನೆಯಲ್ಲಿಟ್ಟಿದ್ದಾಗ ಅಪರಿಚಿತರು ಆದಾಯ ತೆರಿಗೆ ಅಧಿಕಾರಿಗಳೆಂದು ಬಂದು ಪಿಸ್ತೂಲ್ ಹಾಗೂ ಹಣ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸುಲಿಗೆ, ಮೋಸ ಮತ್ತು ಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಮನೆಯ ಸುತ್ತಮುತ ಹಾಗೂ ಅಲ್ಲಿನ ರಸ್ತೆಗಳಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿ ಅಪರಿಚಿತರ ಬಗ್ಗೆ ಮಾಹಿತಿ ಕಲೆ ಹಾಕಿ ಕೊನೆಗೂ ಐದು ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ದರೋಡೆ ಮಾಡಿದ್ದ ಹಣದ ಪೈಕಿ 1.7 ಲಕ್ಷ ನಗದು, ಒಂದು ಪಿಸ್ತೂಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು, ಆದಾಯ ತೆರಿಗೆ ಇಲಾಖೆಯ ಹೆಸರಿನ ನಕಲಿ ಗುರುತಿನ ಚೀಟಿ ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿ, ಮೊದಲನೆ ಆರೋಪಿ ಕೃತ್ಯಕ್ಕೆ ಬಳಸಿದ್ದ ಮತ್ತೊಂದು ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಮನೆಗಳು ಹಾಗೂ ಸೈಟ್‍ಗಳನ್ನು ಹುಡುಕಿಕೊಡಿಸುವ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದು, ಯಾರ್ಯಾರು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ ಎಂಬ ಬಗ್ಗೆ ತಿಳಿದುಕೊಂಡಿದ್ದರು. ಈ ಪ್ರಕರಣದ ಪಿರ್ಯಾದಿಯ ತಂದೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದನ್ನು ಹಾಗೂ ಅವರಿಗೆ ಹೆಚ್ಚು ಬಾಡಿಗೆ ಬರುತ್ತಿದ್ದ ವಿಚಾರ ತಿಳಿದ ಆರೋಪಿಗಳು, ಮನೆ ಬಾಡಿಗೆಗೆ ಕೊಡಿಸುವ ಬ್ರೋಕರ್ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಆರೋಪಿಯೊಂದಿಗೆ ಸೇರಿ ಹಣ ದೋಚಲು ಸಂಚು ರೂಪಿಸಿದ್ದರು.
ಒಟ್ಟಾಗಿ ಐದು ಮಂದಿ ಸೇರಿಕೊಂಡು ಒಳಸಂಚು ನಡೆಸಿ ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಹೋಗಿ ಮನೆ ದರೋಡೆ ಮಾಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಈ ಆರೋಪಿಗಳ ಬಂಧನದಿಂದ ಸಂಜಯನಗರ ಪೊಲೀಸ್ ಠಾಣೆಯ ದರೋಡೆ ಪ್ರಕರಣ ಪತ್ತೆಯಾಗಿರುತ್ತದೆ.
ಜೆಸಿನಗರ ಉಪವಿಭಾಗದ ಎಸಿಪಿ ರೀನಾ ಎನ್.ಸುವರ್ಣ ಮಾರ್ಗದರ್ಶನದಲ್ಲಿ ಸಂಜಯನಗರ ಠಾಣೆ ಇನ್‍ಸ್ಪೆಕ್ಟರ್ ಬಾಲರಾಜ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
