ಬೆಂಗಳೂರು, ಜ.3- ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ದರೋಡೆಕೋರ ಸಿದ್ದಾಪುರ ಪೊಲೀಸರು ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಫರ್ವೇಜ್ ಪಾಷ (21) ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರೋಡೆಕೋರ.
ಮೂರ್ನಾಲ್ಕು ದಿನಗಳ ಹಿಂದೆ ಆರೋಪಿ ಫರ್ವೇಜ್ ಪಾಷ ತನ್ನ ಸಹಚರನೊಂದಿಗೆ ಸೇರಿ ನಡೆದು ಹೋಗುತ್ತಿದ್ದ ಫಯಾಜ್ ಮಹಮ್ಮದ್ ಎಂಬುವರರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಮೊಬೈಲ್ ದರೋಡೆ ಮಾಡಿ ಪರಾರಿಯಾಗಿದ್ದನು.
ದರೋಡೆಕೋರರಿಂದ ಹಲ್ಲೆಗೊಳಗಾದ ಫಯಾಜ್ ಸಿದ್ದಾಪುರ ಠಾಣೆ ಪೊಲೀಸರಿಗೆ ದೂರು ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ದರೋಡೆಕೋರ ಫರ್ವೇಜ್ ಪಾಷನನ್ನು ಬಂಸಿ ವಿಚಾರಣೆಗೊಳಪಡಿಸಿದಾಗ ಕೃತ್ಯಕ್ಕೆ ಉಪಯೋಗಿಸಿದ್ದ ಡ್ರ್ಯಾಗರ್‍ಅನ್ನು ಬನಶಂಕರಿ 6ನೇ ಹಂತದ ಚಿಕ್ಕೇಗೌಡನ ಪಾಳ್ಯದ ಬಿಡಿಎ ಲೇಔಟ್‍ನಲ್ಲಿರುವ ಖಾಲಿ ಜಾಗದಲ್ಲಿರುವ ಪೊದೆಗೆ ಬಿಸಾಡಿರುವುದಾಗಿ ತಿಳಿಸಿದ್ದಾನೆ.
ಡ್ರ್ಯಾಗರ್‍ಅನ್ನು ವಶಪಡಿಸಿಕೊಳ್ಳಲು ಹಾಗೂ ಸ್ಥಳ ಮೊಹಜರಿಗೆ ಸಿದ್ದಾಪುರ ಪೊಲೀಸರು ದರೋಡೆಕೋರ ಫರ್ವೇಜ್ ಪಾಷನನ್ನು ಬನಶಂಕರಿ 6ನೇ ಹಂತದ ಚಿಕ್ಕೇಗೌಡನ ಪಾಳ್ಯದ ಬಿಡಿಎ ಲೇಔಟ್‍ನಲ್ಲಿರುವ ಖಾಲಿ ಜಾಗಕ್ಕೆ ಇಂದು ಬೆಳಗ್ಗೆ 6 ಗಂಟೆಗೆ ಕರೆದೊಯ್ದರು. ಡ್ರ್ಯಾಗರನ್ನು ವಶಪಡಿಸಿಕೊಂಡು ಪಂಚನಾಮೆ ಮುಗಿಸಿ ಹಿಂದಿರುಗುವಾಗ ದರೋಡೆಕೋರ ಅಲ್ಲಿಯೇ ಇದ್ದ ಕಟ್ಟಿಗೆಯಿಂದ ಕಾನ್‍ಸ್ಟೇಬಲ್ ಪರಮೇಶ್ವರ ಮಬ್ರುಕರ್ ಎಂಬುವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.
ಆ ಸಂದರ್ಭದಲ್ಲಿ ಇನ್ಸ್‍ಪೆಕ್ಟರ್ ರಾಜು ಅವರು ತಮ್ಮ ಸರ್ವೀಸ್ ರಿವಾಲ್ವರ್‍ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಪೊಲೀಸರ ಮಾತನ್ನು ಲೆಕ್ಕಿಸದೆ ಮತ್ತೆ ಹಲ್ಲೆಗೆ ಮುಂದಾದಾಗ ಇನ್ಸ್‍ಪೆಕ್ಟರ್ ಹಾರಿಸಿದ ಗುಂಡು ದರೋಡೆಕೋರನ ಎಡಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.
ತಕ್ಷಣ ಪೊಲೀಸರು ದರೋಡೆಕೋರ ಫರ್ವೇಜ್ ಪಾಷನನ್ನು ಸುತ್ತುವರೆದು ವಶಕ್ಕೆ ತೆಗೆದುಕೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
