ಮನೆ ಛಾವಣಿ ಕುಸಿದು ಬಿದ್ದ ಪರಿಣಾಮ 20ಕ್ಕೂ ಹೆಚ್ಚು ಮಂದಿಗೆ ಗಾಯ

ಕುಣಿಗಲ್, ಏ.24-ಮನೆ ಛಾವಣಿ ಮೇಲೆ ನಿಂತು ದೇವರ ಉತ್ಸವ ವೀಕ್ಷಿಸುತ್ತಿದ್ದ ವೇಳೆ ದಿಢೀರಣೆ ಛಾವಣಿ ಕುಸಿದು ಬಿದ್ದ ಪರಿಣಾಮ ಐವರು ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಕ್ಷಿತಾ, ಲಕ್ಷ್ಮೀಶಾ, ಭವ್ಯಾರಾಣಿ, ಚೈತ್ರಾ, ನಾಗೇಶ್, ಭಾವನಾ, ಧರ್ಮ, ಸುರೇಶ್, ಸಿದ್ದಗಂಗಯ್ಯ, ಚಿಕ್ಕಮ್ಮ, ದಾಸಪ್ಪ, ವಾಸುದೇವ, ಗೀತಾ, ಪ್ರಿಯಾ, ಮಹದೇವ, ಲಕ್ಷ್ಮಮ್ಮ, ಪ್ರಿಯಾಂಕ, ಸವಿತಾ, ರಾಜಮ್ಮ, ರಂಜಿತಾ, ನಿಖಿಲ್ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ತಾಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜಿನಿ ಗ್ರಾಮದ ಗ್ರಾಮದೇವತೆ ಶ್ರೀ ಚೌಡೇಶ್ವರಿ ಅಮ್ಮನವರ ಹಬ್ಬ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು, ಇಂದು ಬೆಳಗ್ಗೆ ಕೊಂಡೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಉತ್ಸವನ್ನು ನೋಡಲು ನಿಡಸಾಲೆ, ಮಂಡ್ಯ, ಬೆಂಗಳೂರಿನಿಂದ ಜನರು ಆಗಮಿಸಿದ್ದರು.

ಈ ಉತ್ಸವಕ್ಕೆ ಗ್ರಾಮದ ಸುತ್ತಮುತ್ತಲಿನ ಗ್ರಾಮದೇವತೆಗಳು ಭಾಗವಹಿಸುತ್ತವೆ. ಈ ವೇಳೆ ನಿಡಸಾಲೆಗ್ರಾಮದ ಗ್ರಾಮದೇವತೆ ಕೊಂಡಕ್ಕೆ ಪ್ರವೇಶಿಸುವ ವೇಳೆ ದೇವರ ಮೆರವಣಿಗೆ ಡೊಳ್ಳುಕುಣಿತ, ಸ್ವಾಮಿಕುಣಿತ ನಡೆಯುತ್ತಿತ್ತು. ಇದನ್ನು ವೀಕ್ಷಿಸಲು ಅಲ್ಲೇ ಪಕ್ಕದಲ್ಲಿದ್ದ ಕರಿತಿಮ್ಮಯ್ಯ ಎಂಬುವರ ಹಳೆಯ ಮನೆಯ ಛಾವಣಿ ಮೇಲೆ ಮಕ್ಕಳು, ಮಹಿಳೆಯರು, ಪುರುಷರು ನಿಂತಿದ್ದರು. ಶಿಥಿಲಗೊಂಡಿದ್ದ ಮೇಲ್ಛಾವಣಿ ದಿಢೀರಣೆ ಕುಸಿದು ಬಿದ್ದಿದ್ದು. ಅವಶೇಷಗಳಡಿ ಸಿಲುಕಿದ್ದಾರೆ.

ಕೂಡಲೇ ಅಲ್ಲಿದ್ದ ಪೊಲೀಸರು ಮತ್ತು ಗ್ರಾಮಸ್ಥರು ಅವರನ್ನು ಅಲ್ಲಿಂದ ಹೊರತಂದು ಹುಲಿಯೂರುದುರ್ಗ, ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಡ್ಯ, ಮೈಸೂರು, ಆದಿಚುಂಚನಗಿರಿ, ಬೆಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸಾರ್ವಜನಿಕ ವೈದ್ಯಧಿಕಾರಿ ಗಣೇಶ್‍ಬಾಬು, ಸತೀಶ್ ಬಾಬು, ಕೃಷ್ಣಮೂರ್ತಿ ಸಾಗಿಸಿದ್ದಾರೆ.

ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.