ಚಿಕ್ಕಬಳ್ಳಾಪುರ, ಫೆ.2- ನಂದಿಬೆಟ್ಟಕ್ಕೆ ರೋಪ್‍ವೇ ಮಾಡುವ ಸಂಬಂಧ ಒಂದು ತಿಂಗಳೊಳಗೆ ಟೆಂಡರ್ ಕರೆಯಲಾಗುವುದು ಎಂದು ಪ್ರವಾಸೊದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಹೇಳಿದರು.ನಂದಿಬೆಟ್ಟಕ್ಕೆ ಆಗಮಿಸಿ ವಿವಿಧ ಕಾಮಗಾರಿಗಳ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು.
ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಪ್ರವಾಸಿಗರ ಆಗಮನ ಬಹಳ ಮುಖ್ಯ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದಲ್ಲದೆ, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬಂದು ಹೋಗುವ ಬಗ್ಗೆ ಮಾಹಿತಿ ಇದ್ದು, ಇದಕ್ಕನುಗುಣವಾಗಿ ಸೌಲಭ್ಯ ಹೆಚ್ಚಿಸುವ ಸಂಬಂಧ ಕ್ರಮ ವಹಿಸುವುದಾಗಿ ತಿಳಿಸಿದರು.
ಇದೇ ವೇಳೆ ನಂದಿಬೆಟ್ಟದ ಟಿಪ್ಪು ಡ್ರಾಪ್, ಯೊಗಾ ನಂದೀಶ್ವರಸ್ವಾಮಿ ದೇವಸ್ಥಾನ ವೀಕ್ಷಣೆ ಮಾಡಿದ ನಂತರ ಹದಗೆಟ್ಟ ಶೌಚಾಲಯ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.ಇಲ್ಲಿನ ಹಾಪ್‍ಕಾಮ್ಸ್ ಮಳಿಗೆ, ನಂದಿನಿ ಪಾರ್ಲರ್, ಕೆಎಸ್‍ಟಿಡಿಸಿ ಹೊಟೇಲ್‍ನಲ್ಲಿ ಮಾರಾಟ ಮಾಡಲಾಗುವ ತಿಂಡಿ-ತಿನಿಸು ಹಾಗೂ ವಸ್ತುಗಳ ದರವನ್ನು ಪರಿಶೀಲನೆ ಮಾಡಿದರು.
ರಾಜಕಾರಣದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯ ಉದ್ದೇಶವಿಟ್ಟುಕೊಂಡು ಭೇಟಿ ಮಾಡಿಲ್ಲ. ತುಂಗಾರತಿ ಬಗ್ಗೆ ಸಮಾಲೋಚಿಸಲು ಭೇಟಿ ಮಾಡಿದ್ದೆ ಅಷ್ಟೆ. ಇದರಲ್ಲಿ ರಾಜಕೀಯ ಲೇಪನ ಸಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನಗೆ ಜಿಲ್ಲಾ ಮಾಡಿಕೊಟ್ಟರು, ಏತ ನೀರಾವರಿ ಯೋಜನೆ ಮಾಡಿಕೊಟ್ಟರು.
ಅಂತಹ ಪಕ್ಷವನ್ನು ಬಿಟ್ಟು ನಾನು ಯಾವುದೇ ಅನ್ಯ ಪಕ್ಷಕ್ಕೆ ಹೊಗಲು ಸಾಧ್ಯವೇ ಎಂದು ಪ್ರಶ್ನಿಸಿ ಪಕ್ಷ ಬಿಡದಿರುವ ಬಗ್ಗೆ ಸ್ಪಷ್ಟನೆ ನೀಡಿದರು. ನನ್ನ ಮಗಳು ಇನ್ನೂ ಚಿಕ್ಕವಳು. ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರೋದು ತೀರಾ ಅಪರೂಪ. ಮಗಳನ್ನು ರಾಜಕೀಯಕ್ಕೆ ತರುವ ಉದ್ದೇಶವೂ ನಮಗಿಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರವಾಸೊದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ , ತಾಲ್ಲೂಕು ತಹಸೀಲ್ದಾರ್ ಗಣಪತಿ ಶಾಸ್ತ್ರಿ ಸೇರಿದಂತೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
