ಬೆಂಗಳೂರು,ಮಾ.9- ಹುಡುಗಿ ವಿಚಾರವಾಗಿ ನಡೆದ ಗಲಾಟೆ ವೇಳೆ ಚಾಕುವಿನಿಂದ ಯುವಕನಿಗೆ ಇರಿದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರು ರೌಡಿಗಳು ಇಂದು ಮುಂಜಾನೆ ಪುಲಕೇಶಿನಗರ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿ ಬಿದ್ದಿದ್ದಾರೆ. ಸೈಯದ್ ಮೋಹಿನ್ ಮತ್ತು ಅದ್ನಾನ್‍ಖಾನ್ ಪುಲಕೇಶಿನಗರ ಠಾಣೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊಲೆ ಆರೋಪಿಗಳು. ಈ ಇಬ್ಬರು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್‍ಗಳು.
ಘಟನೆ ವಿವರ: ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಸ್ಕ್ ರಸ್ತೆ, ಕರಂ ಹೋಟೆಲ್ ಬಳಿ ರಾತ್ರಿ 11.30ರ ಸುಮಾರಿನಲ್ಲಿ ಕೆ.ಜಿ.ಹಳ್ಳಿ ಮತ್ತು ಶಿವಾಜಿನಗರದ ಹುಡುಗರ ಮಧ್ಯೆ ಹುಡುಗಿ ವಿಚಾರವಾಗಿ ಜಗಳ ನಡೆದಿದೆ. ಕೆ.ಜಿ.ಹಳ್ಳಿ ನಿವಾಸಿ ಶೇಖ್ ಮೊಹಮ್ಮದ್ ಉಸ್ಕಾನ್ ಹುಡುಗಿಯನ್ನು ಸಿನಿಮಾಗೆ ಕರೆದುಕೊಂಡು ಹೋಗಿದ್ದಾನೆಂದು ಶಿವಾಜಿನಗರದ ಹುಡುಗರ ಮಧ್ಯೆ ಜಗಳ ವಾಗಿದೆ. ಆ ಸಂದರ್ಭದಲ್ಲಿ ಶೇಕ್ ಮೊಹಮ್ಮದ್
ಕೈಯಿಂದ ಹೊಡೆದಿದ್ದಾನೆ. ಅದೇ ಕೋಪದಲ್ಲಿ ಆರೋಪಿಗಳು ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾರೆ.
ಗಂಭೀರ ಗಾಯಗೊಂಡ ಶೇಕ್ ಮೊಹಮ್ಮದ್ ಉಸ್ಕಾನ್‍ನನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈತ ಜಿಮ್‍ಗೆ ಹೋಗುತ್ತಿದ್ದನಲ್ಲದೆ, ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಈ ಬಗ್ಗೆ ಪುಲಕೇಶಿನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು. ಆರೋಪಿಗಳ ಪತ್ತೆಗಾಗಿ ಪುಲಕೇಶಿನಗರ ಠಾಣೆ ಸಬ್‍ಇನ್ಸ್‍ಪೆಕ್ಟರ್‍ಗಳಾದ ರುಮಾನ್ ಮತ್ತು ಆನಂದ್ ಅವರ ನೇತೃತ್ವದಲ್ಲಿ ಒಂದು ತಂಡ ರಚಿಸಲಾಯಿತು.
ಈ ತಂಡ ರಾತ್ರಿಯಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದಾಗ ಆರೋಪಿಗಳು ಕಲ್ಪಳ್ಳಿ ಮತ್ತು ಬೈಯಪ್ಪನಹಳ್ಳಿ ಮಧ್ಯದ ರಸ್ತೆಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ದೊರೆತಿದೆ. ತಕ್ಷಣ ಈ ತಂಡ ಬೆಳಗಿನ ಜಾವ 5.30ರಲ್ಲಿ ಸ್ಥಳಕ್ಕೆ ಹೋಗುತ್ತಿದ್ದಂತೆ ಕೊಲೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.
ಆ ಸಂದರ್ಭದಲ್ಲಿ ಕಾನ್‍ಸ್ಟೆಬಲ್ ಒಬ್ಬರು ಗಾಯಗೊಂಡರು. ತಕ್ಷಣ ಸಬ್‍ಇನ್ಸ್‍ಪೆಕ್ಟರ್‍ಗಳು ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಪೊಲೀಸರ ಮಾತನ್ನು ಲೆಕ್ಕಿಸದೆ ಮತ್ತೆ ದಾಳಿಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಆನಂದ್ ಅವರು ಹಾರಿಸಿದ ಗುಂಡು ಆರೋಪಿ ಸಯ್ಯದ್ ಮೊಹಿನ್ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.
ಸಬ್‍ಇನ್ಸ್‍ಪೆಕ್ಟರ್ ರುಮಾನ್ ಹಾರಿಸಿದ ಗುಂಡು ಅದ್ನಾನ್‍ಖಾನ್‍ಗೆ ತಗುಲಿದಾಗ ಆತ ಸಹ ಕುಸಿದು ಬಿದ್ದನು. ತಕ್ಷಣ ಪೊಲೀಸರು ಈ ಇಬ್ಬರನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದು, ಮೂವರು ಆರೋಪಿಗಳನ್ನು ಬಂಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
