ಘರ್ಜಿಸಿದ ಪೊಲೀಸರ ಪಿಸ್ತೂಲು, ಕೊಲೆ ಆರೋಪಿಗೆ ಗುಂಡೇಟು

ಬೆಂಗಳೂರು, ಮಾ.26- ಬಂಧಿಸಲು ಬಂದಿದ್ದ ಪೊಲೀಸರ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡಲು ಯತ್ನಿಸಿದ ಕೊಲೆ ಆರೋಪಿ, ರೌಡಿ ಧನುಷ್ (24) ಅಲಿಯಸ್ ದಡಿಯಾ ಧನುಷ್ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಹನುಮಗಿರಿ ಬೆಟ್ಟ(ಗುಡ್ಡ)ದಲ್ಲಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಇನ್ಸ್‍ಪೆಕ್ಟರ್ ಜನಾರ್ಧನ್ ಅವರು ಹಾರಿಸಿದ ಗುಂಡು ತಗುಲಿ ಗಾಯಗೊಂಡಿರುವ ಧನುಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಾ.23ರಂದು ರಾತ್ರಿ ಇಟ್ಟಮಡು ಮುಖ್ಯರಸ್ತೆಯ ರೂಮ್ ಒಂದರಲ್ಲಿ ಮಂಜುನಾಥ ಅಲಿಯಾಸ್ ಮಂಜ ಅಲಿಯಾಸ್ ದಡಿಯಾ ಮಂಜನನ್ನು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿ ಧನುಷ್ ಮತ್ತು ಆತನ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಚನ್ನಮ್ಮನಕೆರೆ ಅಚ್ಚಕಟ್ಟು ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ್ದರು.

ಪ್ರಮುಖ ಆರೋಪಿ ಧನುಷ್ ಹನುಮಗಿರಿ ಬೆಟ್ಟದಲ್ಲಿ ಅವಿತುಕುಳಿತಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಪಿ.ಆರ್.ಜನಾರ್ಧನ್, ಪಿಎಸ್‍ಐ ಪುಟ್ಟಸ್ವಾಮಿ, ಹೆಡ್‍ಕಾನ್‍ಸ್ಟೆಬಲ್‍ಗಳಾದ ಷಡಕ್ಷರಸ್ವಾಮಿ, ಶ್ರೀನಿವಾಸಮೂರ್ತಿ, ನಾಗರಾಜ ನಾಯಕ್, ಕಾನ್‍ಸ್ಟೆಬಲ್ ಲೋಕೇಶ್ ಅವರು ಸ್ಥಳಕ್ಕೆ ಹೋಗಿದ್ದರು. ಇಂದು ಮುಂಜಾನೆ ಸ್ಥಳದಲ್ಲಿ ಆರೋಪಿಯನ್ನು ಹುಡುಕಾಡುತ್ತಿದ್ದಾಗ ಗುಡ್ಡದಲ್ಲಿ ಅವಿತು ಕುಳಿತಿದ್ದ ಧನುಷ್ ಪೊಲೀಸರನ್ನು ನೋಡಿ ಕೈಯಲ್ಲಿ ಲಾಂಗ್ ಹಿಡಿದು ಎದುರಿಗೆ ಬಂದಿದ್ದಾನೆ.

ನಾವು ಪೆÇಲೀಸರು ಎಂದು ಹೇಳಿ ಆತನನ್ನು ಹಿಡಿಯಲು ಹೋದಾಗ ಆರೋಪಿ ಧನುಷ್ ಕಾನ್‍ಸ್ಟೆಬಲ್ ಲೋಕೇಶ್ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿ ರಕ್ತಗಾಯಗೊಳಿಸಿದ್ದಾನೆ. ಈ ಸಂದರ್ಭದಲ್ಲಿ ಪ್ರಾಣಾಪಾಯ ತಪ್ಪಿಸುವ ಸಲುವಾಗಿ ಇನ್ಸ್‍ಪೆಕ್ಟರ್ ಜನಾರ್ಧನ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ.

ಆದರೂ ಆರೋಪಿ ಹಲ್ಲೆ ಮಾಡಲು ಮುಂದಾದಾಗ ಆತ್ಮ ರಕ್ಷಣೆಗಾಗಿ ಇನ್ಸ್‍ಪೆಕ್ಟರ್ ಹಾರಿಸಿದ ಗುಂಡು ಆತನ ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಸುತ್ತುವರಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದಾರೆ. ಧನುಷ್ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಕೊಲೆ, ಕೊಲೆಯತ್ನದ ಎರಡು ಪ್ರಕರಣಗಳು, ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿವೆ.

ಪೊಲೀಸರ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಧನುಷ್ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಕೆ ಅಚ್ಚುಕಟ್ಟು ಠಾಣೆ ಪೊಲೀಸರ ಈ ಕಾರ್ಯಾಚರಣೆಯನ್ನು ದಕ್ಷಿಣ ಉಪವಿಭಾಗದ ಡಿಸಿಪಿ ಹರೀಶ್‍ಪಾಂಡೆ ಅವರು ಮೆಚ್ಚಿ ಶ್ಲಾಘಿಸಿದ್ದಾರೆ.